fbpx
ಸಮಾಚಾರ

‘ರಾಬರ್ಟ್’ ಬಗ್ಗೆ ಸಿನಿಪ್ರೇಮಿಗಳಿಗೆ ನಿರ್ದೇಶಕ ತರುಣ್ ಸುಧೀರ್ ಭಾವನಾತ್ಮಕ ಪತ್ರ

 

ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗಿದೆ. ಪೋಸ್ಟರ್, ಟೀಸರ್ ಹಾಗೂ ಹಾಡುಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ರಾಬರ್ಟ್‌ ಸಿನಿಮಾ ಇದೀಗ ಬಿಡುಗಡೆಯಾಗಿದೆ. ಒಂದು ವಾರದಿಂದ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಸೋಲ್ಡ್‌ ಔಟ್ ಆಗಿದೆ. ಬರೋಬ್ಬರಿ 1200 ಸ್ಕ್ರೀನ್‌ಗಳಲ್ಲಿ ರಾಬರ್ಟ್‌ ಪ್ರದರ್ಶನ ಶುರುವಾಗಿದೆ.

 

 

ಈ ಸುಸಂಧರ್ಭದಲ್ಲಿ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಸಿನಿಪ್ರೇಮಿಗಳಿಗೆ ಒಂದು ಸುದೀರ್ಘ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಆ ಪತ್ರವನ್ನು ತರುಣ್ ಸುಧೀರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಪತ್ರದ ಯಥಾವತ್ತು ರೂಪ ಈ ಕೆಳಗಿನಂತಿದೆ.

ಸಿನಿಮಾ ಎಂಬ ಚೌಕಟ್ಟನ್ನು ಬಿಟ್ಟು ಬೇರೇನೂ ಗೊತ್ತಿಲ್ಲದವನು ನಾನು, ಕಾಕತಾಳೀಯವೂ ಏನೋ ಎಂಬಂತೆ ನನ್ನ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ‘ಚೌಕ’ ಎಂದೇ ಹೆಸರಿಡುವಂತಾಯಿತು. ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ ಗೌಡರು ನನ್ನ ಮೇಲಿಟ್ಟಿರುವ ನಂಬಿಕೆ ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸರ್‌ ನನ್ನ ಮೇಲಿಟ್ಟಿರುವ ಭರವಸೆ ನನಗೆ “ರಾಬರ್ಟ್‌” ಸಿನಿಮಾ ಮಾಡಲು ಪ್ರೇರಣೆಯಾಯಿತು.

ಇಷ್ಟು ದೊಡ್ಡ ಚಿತ್ರವನ್ನು ನಾನು ಯಾವುದೇ ಆತಂಕ ಭಯವಿಲ್ಲದೇ ನಿರ್ದೇಶಿಸಲು ಕಾರಣ ನನ್ನ ಬೆನ್ನ ಹಿಂದೆ ಬಂಡೆಯಂತೆ ನಿಂತ ನನ್ನ ನುರಿತ ತಂತ್ರಜ್ಞರ ತಂಡ. ರಾಬರ್ಟ್‌ ಎಂಬ ನನ್ನ ಧ್ವನಿ ಎಲ್ಲಾ ದಿಕ್ಕುಗಳಲ್ಲೂ ಪ್ರತಿಧ್ವನಿಸಿದ್ದು ನನ್ನ ತಂಡದ ಪರಿಶ್ರಮದಿಂದ.

ಯಾವುದೇನೇ ಇರಲಿ ನಾನು ನಿರ್ದೇಶಕನಾಗಿ ಅನುಭವವನ್ನು ಉಪಯೋಗಿಸಿಕೊಂಡದ್ದು , ಶ್ರಮವನ್ನು ಹಾಕಿದ್ದು, ನಿರ್ಮಾಪಕರನ್ನು ಹುಡುಕಿದ್ದು, ಕತೆ ಚಿತ್ರಕತೆಯನ್ನು ಹೆಣೆದಿದ್ದು, ಕಲಾವಿದರನ್ನು ಬಳಸಿದ್ದು, ಸಂಗೀತ ಮಾಡಿಸಿದ್ದು, ಸಾಹಿತ್ಯ ಸಂಭಾಷಣೆ ಬರೆಸಿದ್ದು, ಸಾಹಸ ನೃತ್ಯ ಚಿತ್ರೀಕರಿಸಿದ್ದು, ಓಡಾಟ ಹಾರಾಟ ಪ್ರತಿಯೊಂದೂ ನಿಮಗಾಗಿ ಮತ್ತು ನಿಮ್ಮ ಮನರಂಜನೆಗಾಗಿ.

ಓಣಿಯ ಮಗು ಎಲ್ಲಾ ಕಡೆ ಆಡಿ ಕುಣಿದು ಕೊನೆಗೆ ಅಮ್ಮನ ಮಡಿಲು ಸೇರುವಂತೆ ರಾಬರ್ಟ್‌ ನಿಮ್ಮ ಮಡಿಲು ಸೇರಲಿದೆ, ಇಂದಿನಿಂದ ಅದು ನಿಮ್ಮ ರಾಬರ್ಟ್‌. ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ರಾಬರ್ಟ್‌ ಚಿತ್ರವನ್ನು ನೋಡಿ ಹರಸಿ ಹಾರೈಸಿ ಬೆಳೆಸಿ. ಅಲ್ಲಿಯವರೆಗೂ ನಾನು ಪರೀಕ್ಷೆ ಬರೆದ ವಿದ್ಯಾರ್ಥಿಯಂತೆ, ಚುನಾವಣೆ ಎದುರಿಸಿದ ಅಭ್ಯರ್ಥಿಯಂತೆ ಫಲಿತಾಂಶಕ್ಕಾಗಿ ಕಾಯುತ್ತಿರುವ ತರುಣನಂತೆ ನಿಮ್ಮ ಅಭಿಪ್ರಾಯ ಅನಿಸಿಕೆಗೆ ಕಾಯುತ್ತಿರುತ್ತೇನೆ.

ಇಂತಿ ನಿಮ್ಮ
ತರುಣ್ ಕಿಶೋರ್ ಸುಧೀರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top