fbpx
ಸಮಾಚಾರ

ಭಾರತ-ಇಂಗ್ಲೆಂಡ್‌ 3ನೇ ಟಿ-20 ಪಂದ್ಯಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌..!

ಆರಂಭಿಕ ಆಘಾತದ ಬಳಿಕ ಪುಟಿದೆದ್ದು ನಿಲ್ಲುವ ಛಲವನ್ನು ಮತ್ತೊಮ್ಮೆ ಪ್ರದರ್ಶಿಸಿರುವ ಭಾರತ ತಂಡ ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸುವ ಹಂಬಲದಲ್ಲಿದೆ. ಸದ್ಯ 1-1 ಸಮಬಲದಲ್ಲಿರುವ 5 ಪಂದ್ಯಗಳ ಸರಣಿಯ 3ನೇ ಚುಟುಕು ಕ್ರಿಕೆಟ್ ಕದನ ಮಂಗಳವಾರ ನಡೆಯಲಿದ್ದು, ವಿರಾಟ್ ಕೊಹ್ಲಿ ಬಳಗ ಮುನ್ನಡೆ ಸಾಧಿಸುವ ಮೂಲಕ ಸರಣಿ ಗೆಲುವಿನತ್ತ ಮುನ್ನಡೆಯುವ ಗುರಿ ಹೊಂದಿದೆ.

ಕೋವಿಡ್‌-19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಇನ್ನುಳಿದ ಮೂರು ಟಿ20 ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ರದ್ದುಗೊಳಿಸಲಾಗಿದೆ ಎಂದು ಗುಜರಾತ್ ಕ್ರಿಕೆಟ್‌ ಅಸೋಸಿಯೇಷನ್‌ ಸೋಮವಾರ ರಾತ್ರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ಮೂರನೇ ಪಂದ್ಯ ಜರುಗಲಿದ್ದು, ಮಾರ್ಚ್‌ 18 ಹಾಗೂ 20 ರಂದು ಇನ್ನುಳಿದ ಎರಡು ಪಂದ್ಯಗಳು ನಡೆಯಲಿವೆ. ಈ ಮೂರು ಪಂದ್ಯಗಳನ್ನು ಮುಚ್ಚಿದ ಅಂಗಳದಲ್ಲಿ ನಡೆಸಲಾಗುತ್ತಿದೆ.

ಗುಜರಾತ್‌ನಲ್ಲಿ ಅದರಲ್ಲೂ ಅಹ್ಮದಾಬಾದ್‌ ನಗರದಲ್ಲಿ ಕೋವಿಡ್‌-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳ ಹಿತದೃಷ್ಠಿಯಿಂದ ಮುಚ್ಚಿದ ಅಂಗಳದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಎರಡು ಪಂದ್ಯಗಳನ್ನು ಕಣ್ತುಂಬಿಸಿಕೊಂಡಿದ್ದ ಕ್ರಿಕೆಟ್‌ ಪ್ರೇಮಿಗಳಿಗೆ ಇದೀಗ ಭಾರಿ ನಿರಾಸೆಯುಂಟಾಗಿದೆ.

ಸುಮಾರು 1.30 ಲಕ್ಷ ಮಂದಿ ಏಕಕಾಲದಲ್ಲಿ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸಬಹುದಾದ ಮೈದಾನದಲ್ಲಿ 50 ಪ್ರತಿಶತ ಮಂದಿಗೆ ಟಿ20 ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ಹಾಗೂ ಗುಜರಾತ್ ಕ್ರಿಕೆಟ್ ಮಂಡಳಿ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮೊದಲೆರಡು ಟಿ20 ಪಂದ್ಯಗಳ ಪೈಕಿ ಪ್ರತಿ ಪಂದ್ಯದಲ್ಲಿ ಸುಮಾರು 65 ಸಾವಿರ ಮಂದಿ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದು ಪಂದ್ಯಗಳನ್ನು ವೀಕ್ಷಿಸಿದ್ದರು. ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಲು ಬಹುತೇಕ ಪಂದ್ಯದ ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top