fbpx
ಸಮಾಚಾರ

“ಅಂದು, ಇಂದು ಹಾಗೂ ಮುಂದೆಂದೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು” ಸಂಸತ್‌ನಲ್ಲಿ ಕನ್ನಡ ಕಹಳೆ ಮೊಳಗಿಸಿದ ಸಂಸದ ಜಿಸಿ ಚಂದ್ರಶೇಖರ್

ಪ್ರತಿ ಭಾರಿ ಸಂಸತ್ ಅಧಿವೇಶನ ನಡೆದಾಗಲೂ ಕರ್ನಾಟಕದ ಪರವಾಗಿ ಕೇಳುವ ಒಂದೇ ಒಂದು ಧ್ವನಿ ಅಂದರೆ ಅದು ಸಂಸದ ಜಿಸಿ ಚಂದ್ರಶೇಖರ್ ಅವರದ್ದು ಮಾತ್ರ. ಕನ್ನಡ ನಾಡು ನುಡಿ ಬಗ್ಗೆ ವಿಪರೀತ ಕಾಳಜಿ, ಅಭಿಮಾನ ಹೊಂದಿರುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವ್ರು ಮಿಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ. ಅಪ್ಪಟ ಕನ್ನಡಾಭಿಮಾನಿಯಾಗಿರುವ ಚಂದ್ರಶೇಖರ್ ಅವ್ರು ಪ್ರತಿ ಭಾರಿ ಸಂಸತ್ ಅಧಿವೇಶನ ನಡೆದಾಗಲೂ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ಜ್ವಲಂತ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವನಿಯೆತ್ತುತ್ತಿದ್ದಾರೆ. ಇದೀಗ ಚಂದ್ರಶೇಖರ್ ಅವ್ರು ಅಧಿವೇಶನದಲ್ಲಿ ಕರ್ನಾಟಕದ ಅತಿ ಮುಖ್ಯ ವಿವಾದವಾಗಿರುವ ಬೆಳಗಾವಿ ಗಡಿ ವಿಚಾರದ ಬಗ್ಗೆ ಗರ್ಜಜಿಸಿದ್ದಾರೆ,.

 

 

ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡಂದಂತೆ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ. ಸುಮ್ಮನಿರುವ, ಕನ್ನಡಿಗರನ್ನು ಪದೇ ಪದೇ ಕೆಣಕುವುದು ಮರಾಠಿಗರ ಕಾಯಕವಾಗಿಬಿಟ್ಟಿದೆ. ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದರೂ ಅಲ್ಲಿನ ನಾಯಕರು ಉದ್ಧಟತನದ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸುತ್ತಲೇ ಇದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಸಿಎಂ ಆದ ಆರಂಭದಿಂದಲೇ ಕರ್ನಾಟಕ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿ ವಿವಾದ ಎಬ್ಬಿಸುತ್ತಲೇ ಇದ್ದಾರೆ. ಇತ್ತೀಚಿಗೂ ಬೆಳಗಾವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿತ್ತು. ಕರ್ನಾಟದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂಬ ಉದ್ಧವ್‌ ಠಾಕ್ರೆ ಹೇಳಿಕೆ ಕನ್ನಡಿಗರ ಪಿತ್ತ ನೆತ್ತಿಗೇರಿದ್ದು, ಹೋರಾಟಕ್ಕೆ ಇಳಿಯುವಂತೆ ಮಾಡಿದೆ. ಮಹಾ ಸಿಎಂ ವಿರುದ್ಧ ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಇದೆ ವಿಚಾರವಾಗಿ ಇದೀಗ ಸಂಸದ ಜಿಸಿ ಚಂದ್ರಶೇಖರ್ ಅವರು ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

 

 

ಜಿಸಿ ಚಂದ್ರಶೇಖರ್ ಸಂಸತ್ ನಲ್ಲಿ ಹೇಳಿದ್ದೇನು?

“ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ, ಗಾಂಧೀಜಿಯವರ ಅಹಿಂಸೆ ಸಂದೇಶ ಪ್ರಪಂಚಕ್ಕೆ ಮಾನವೀಯತೆಯನ್ನು ಕಳಿಸಿದೆ. 1956ರಲ್ಲಿ ಕೇಂದ್ರ ಸರ್ಕಾರದಿಂದ ಭಾಷಾವಾರು ಪ್ರಾಂತ್ಯ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ, ಸುಪ್ರೀಂ ಕೋರ್ಟ್ ನ ಮಹಾಜನ್ ವರದಿ ಕೂಡ ಬೆಳೆಗಾವಿ ಕರ್ನಾಟಕಕ್ಕೆ ಸೇರಿದೆ ಎಂದು ಹೇಳಿದೆ. ಹೀಗಿದ್ದರೂ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಕರ್ನಾಟಕದ ಜೊತೆ ಪದೇ ಪದೇ ತಕರಾರು ತೆಗೆಯುತ್ತಲೇ ಬಂದಿದೆ.” ಎಂಬ ಮಾಹಿತಿಯನ್ನು ಸದನಕ್ಕೆ ಜಿಸಿಸಿ ನೀಡಿದ್ದಾರೆ.

“ಸಂವಿಧಾನದ ವಿಧಿ 263 ,331 ರ ಪ್ರಕಾರ ರಾಜ್ಯಗಳ ಗಡಿ ವಿವಾದ ಪರಸ್ಪರ ಮಾತುಕತೆಯಲ್ಲಿ ಬಗೆಹರಿಯದಿದ್ದರೆ ಸುಪ್ರೀಂ ಕೋರ್ಟ್ ಮದ್ಯೆ ಪ್ರವೇಶಿಸಬೇಕೆಂದು ತಿಳಿಸಿದ್ದರೂ ಕೂಡ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕನ್ನಡಿಗರು ಸ್ವಾಭಿಮಾನದಿಂದ ಆಚರಿಸುವ ಕನ್ನಡ ರಾಜ್ಯೋತ್ಸವದಂದು ಸಂಘರ್ಷಕ್ಕೆ ಇಳಿದು ‘ಕರಾಳ ದಿನ’ವನ್ನಾಗಿ ಆಚರಿಸಬೇಕೆಂದು ಮಹಾರಾಷ್ಟ್ರದ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿದ್ದಾರೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂದು ಹೇಳುವುದು ಮತ್ತು ಸೀಮಾ ಸಂಕಲ್ಪ ಎಂಬ ಹೆಸರಿನಲ್ಲಿ ಬೆಳಗಾವಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಕನ್ನಡಿಗರ ಭಾವನೆಗೆ ದಕ್ಕೆ ತರುತ್ತಿದೆ. ಈ ರೀತಿಯ ಅನಗತ್ಯ ಹೇಳಿಕೆಗಳಿಂದ ನಮ್ಮ ರಾಜ್ಯ ಹತ್ತಿ ಉರಿಯುತ್ತಿದೆ. ನಾವು ಸ್ವಾಭಿನದಿಂದ ಗಾಂಧಿಮಾರ್ಗದಲ್ಲಿ ಪ್ರತಿಭಟಿಸಿ ನಮ್ಮ ಗಾಡಿಯನ್ನು ಕಾಪಾಡಿಕೊಳ್ಳುತ್ತೇವೆಯೇ ಹೊರತು ಒಂದಿಂಚು ಗಡಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎಂದು ಜಿಸಿ ಚಂದ್ರಶೇಖರ್ ಮಹಾರಾಷ್ಟ್ರ ಸರ್ಕಾರದ ಉಪಟಲಗಳ ವಿರುದ್ಧ ಘರ್ಜಿಸಿದರು.

“ನಾವು ಸಂಯುಕ್ತ ವ್ಯವಸ್ಥೆಯಲ್ಲಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮದ್ಯೆ ಪ್ರವೇಶಿಸಿ ಅನಗತ್ಯ ಹೇಳಿಕೆ ನೀಡದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ಮಾಡಬೇಕು. ಈ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಅನಗತ್ಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕದಡದಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಹೇಳಬೇಕು.. ಬೆಳಗಾವಿ ಹಿಂದೆಯೂ ಕರ್ನಾಟಕದ್ದಾಗಿತ್ತು, ಈಗಲೂ ಕರ್ನಾಟಕದ್ದೇ ಆಗಿದೆ ಮುಂದೆಯೂ ಕರ್ನಾಟಕದ ಅವಿಭಾಜ್ಯ ಅಂಗವಾಗಿರುತ್ತದೆ” ಎಂದು ಗುಡುಗುವ ಮೂಲಕ ಜಿಸಿ ಚಂದ್ರಶೇಖರ್ ಸದನದಲ್ಲಿ ಕನ್ನಡ ಬಾವುಟ ಹಾರಿಸಿದ್ದಾರೆ.

ಜಿಸಿ ಚಂದ್ರಶೇಖರ್ ಅವರು ಬೆಳಗಾವಿ ಕುರಿತು ಸಂಸತ್ ನಲ್ಲಿ ಮಾತನಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಪರವಾಗಿ ಧ್ವನಿಯೆತ್ತಿದ್ದಕೆ ಸಂಸದರಿಗೆ ನೆಟ್ಟಿಗರು ಬಹುಪರಾಕ್ ಹೇಳುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಸಮಸ್ಯೆಗಳನ್ನು ಸಂಸತ್ ನಲ್ಲಿ ಪ್ರಸ್ತಾಪಿಸುವ ಸಂಸದರು ಇಲ್ಲದಂತಾಗಿತ್ತು, ಈಗ ಸಂಸದ ಜಿಸಿ ಚಂದ್ರಶೇಖರ್ ಕನ್ನಡಿಗರ ಪ್ರತಿ ಸಮಸ್ಯೆಗಳ ಕುರಿತು ಧ್ವನಿಯೆತ್ತುತ್ತಿರುವುದು ನಿಜಕ್ಕೂ ಶ್ಲಾಘನೀಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top