fbpx
ಸಮಾಚಾರ

ಮದುವೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರಾ ಕೋಟೂರು: ವಿವಾದದಲ್ಲಿ ಬಿಗ್ ಬಾಸ್ ಸ್ಪರ್ದಿಯ ವಿವಾಹ

ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಮದುವೆಯಾದ ಕೆಲವೇ ತಾಸುಗಳಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ. ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್‌ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ (ಮಾರ್ಚ್ 28) ಬೆಳಿಗ್ಗೆಯಷ್ಟೇ ಮದುವೆಯಾಗಿದ್ದರು. ಬಳಿಕ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಗೆ ಪರಸ್ಪರ ದೂರು ಕೊಟ್ಟಿದ್ದಾರೆ.

 

 

ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ರನ್ನ ಕೂಡಿ ಹಾಕಿ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್, ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ. ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ ಎಂದು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದವರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.

‘ನನಗೆ ಚೈತ್ರಾ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಗೃಹ ಬಂಧನದಲ್ಲಿಟ್ಟು ಬೆದರಿಸಿ ಬಲವಂತವಾಗಿ ಅವರೊಂದಿಗೆ ಮದುವೆ ಮಾಡಿಸಿದ್ದಾರೆ’ ಎಂದು ನಾಗಾರ್ಜುನ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚೈತ್ರಾ, ‘ನಾನು ಮತ್ತು ನಾಗಾರ್ಜುನ್‌ ಹಲವು ವರ್ಷಗಳಿಂದ ಪರಿಚಿತರು. ಪರಸ್ಪರರು ಪ್ರೀತಿಸಿ ಮದುವೆಯಾಗಿದ್ದೇವೆ. ನಾಗಾರ್ಜುನ್‌ ನನಗೆ ತುಂಬಾ ಇಷ್ಟ. ನಾನು ಅವರೊಂದಿಗೆ ಬದುಕುತ್ತೇನೆ’ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಸದ್ಯ ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ತಗಾದೆ ತೆಗೆದಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೈತ್ರಾ ಕೋಟೂರ್, ನಾಗಾರ್ಜುನ್ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top