fbpx
ಸಮಾಚಾರ

ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರತಿಮಾ ದೇವಿ ನಿಧನ

ಚಂದನವನದ ಹಿರಿಯ ನಟಿ, 1947 ಸುಮಾರರಿಂದ 2000ನೇ ದಶಕದ ವರೆಗೆ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಮಾಡಿದ್ದ ಅನುಭವಿ ಕಲಾವಿದೆ ಪ್ರತಿಮಾ ದೇವಿ ಇಂದು (ಏಪ್ರಿಲ್ 6) ನಿಧನ ಹೊಂದಿದ್ದಾರೆ. ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ತಾಯಿಯೂ ಆಗಿರುವ, 88 ವರ್ಷ ವಯಸ್ಸಿನ ಪ್ರತಿಮಾ ದೇವಿ ಇಂದು ಮರಣಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರತಿಮಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

‘ಮಧ್ಯಾಹ್ನ ಊಟಕ್ಕೆ ಮೊದಲು ಕೆಲ ಕಾಲ ನಿದ್ದೆ ಮಾಡುವ ಅಭ್ಯಾಸ ಅಮ್ಮನಿಗಿತ್ತು. ಮಂಗಳವಾರ ಮಧ್ಯಾಹ್ನ ನಿದ್ದೆ ಮಾಡಿದ್ದರು. ಊಟಕ್ಕೆ ಕರೆಯಲು ಹೋದಾಗ ಎದ್ದೇಳಲಿಲ್ಲ. ವಯೋಸಹಜ ಸಾವು ಇದು. ಪ್ರಜ್ಞೆತಪ್ಪಿರಬಹುದೆಂದು ಆಸ್ಪತ್ರೆಗೂ ಕರೆದೊಯ್ದಿದ್ದೆವು. ಆದರೆ ನಿದ್ದೆ ಮಾಡುತ್ತಿರುವ ವೇಳೆಯೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು’ ಎಂದು ಮಗಳ ವಿಜಯಲಕ್ಷ್ಮಿ ಸಿಂಗ್‌ ಹೇಳಿದ್ದಾರೆ.

ಇನ್ನು ಮೈಸೂರಿನ ಸರಸ್ವತಿಪುರಂನ ನಿವಾಸದಲ್ಲಿ ಪ್ರತಿಮಾ ಅವರ ಪಾರ್ಥಿವ ಶರೀರವನ್ನು ಇಡಲಾಗುತ್ತಿದೆ. ಇಂದು (ಏಪ್ರಿಲ್ 7) ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದು, ನಂತರ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.

1947ರಲ್ಲಿ ಕೃಷ್ಣ ಲೀಲಾ ಸಿನಿಮಾ ಮೂಲಕ ಅಭಿನಯಕ್ಕೆ ಕಾಲಿಟ್ಟಿದ್ದ ಪ್ರತಿಮಾ ದೇವಿ ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಧರ್ಮಸ್ಥಳ ಮಹಾತ್ಮೆ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಸುಮಾರು ಅರವತ್ತೈದು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತಿ ಪ್ರತಿಮಾ ದೇವಿ ಇನ್ನು ನೆನಪು ಮಾತ್ರ.

2001-02 ರಲ್ಲಿ ಜೀವಮಾನದ ಸಾಧನೆಗಾಗಿ ಡಾ. ರಾಜ್ ಕುಮಾರ್ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಇವರ ಇಡೀ ಕುಟುಂಬವೇ ಸ್ಯಾಂಡಲ್ ವುಡ್ ನಲ್ಲಿ ತೊಡಗಿಕೊಂಡಿದೆ. ಖ್ಯಾತ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಸಂಗ್ರಾಮ್‌ ಸಿಂಗ್‌, ಜಯರಾಜ್‌ ಸಿಂಗ್‌ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಇವರ ಮಕ್ಕಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top