fbpx
ಸಮಾಚಾರ

“ನಿನ್ನ ಬಿಟ್ಟು ಬದಕಲು ಯಾಕೆ ಕಲಿಸಲಿಲ್ಲ ಅಮ್ಮ?” ಭಾವುಕ ಪತ್ರ ಬರೆದ ವಿಜಯಲಕ್ಷ್ಮಿ ಸಿಂಗ್!

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಪ್ರತಿಮಾ ದೇವಿ ವಯೋ ಸಹಜ ಕಾಯಿಲೆಯಿಂದ ಏಪ್ರಿಲ್ 6ರಂದು ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದರು. 88 ವರ್ಷದ ಪ್ರತಿಮಾ ದೇವಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು, ಇಳೀ ವಯಸ್ಸಿನಲ್ಲೂ ಇಂಡಿಪೆಂಡೆಂಟ್ ಆಗಿದ್ದರು. ಪ್ರತಿಮಾ ದೇವಿ ಕೊನೆ ಕ್ಷಣಗಳು ಹೇಗಿತ್ತು ಎಂದು ಪುತ್ರಿ ವಿಜಯ್‌ ಲಕ್ಷ್ಮಿ ಬರೆದುಕೊಂಡಿದ್ದಾರೆ.

 

 

ವಿಜಯಲಕ್ಷ್ಮೀ ಸಿಂಗ್ ಬರೆದ ಪತ್ರವಿದು
ನನ್ನ ಮುದ್ದು “ಅಮ್ಮ”
ಇಂದಿಗೆ ನೀನು ನಮ್ಮನ್ನ ಅಗಲಿ 15 ದಿನಗಳಾಯಿತು. ನಾನು ಹುಟ್ಟಿದಾಗಿನಿಂದ ನಿನ್ನ ಬಿಟ್ಟು ಬೇರೆ ಇದ್ದಿಲ್ಲ .ಈಗ ನೀನು ಇರದ ಈ ಜಗತ್ತು ನನಗೆ ಕಷ್ಟ ಎನಿಸುತ್ತಿದೆ. ಎಷ್ಟು ವಿಷಯ ನಿಂಗೆ ಹೇಳಬೇಕು, ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು ಅನಿಸುತ್ತೆ. ಆದರೆ ನನಗೆ ಜೀವನದಲ್ಲಿ ಎಲ್ಲ ವಿಷಯವನ್ನು ಕಲಿಸಿದೆ, ಆದರೆ ನಿನ್ನ ಬಿಟ್ಟು ಬದುಕಲು ಯಾಕೆ ಕಲಿಸಲಿಲ್ಲ ಅಮ್ಮ? ಆ ದಿನ ಬಾಲ್ಕನಿಯಲ್ಲಿ ಕೂತು ಮುಂಜಾನೆ ಕಾಫಿ ಸವಿಯುತ್ತ, ನೀನು ನಿನ್ನ ಬರ್ತಡೇ ಸೆಲೆಬ್ರೇಶನ್ ಇನ್ನೂ 3 ದಿನಗಳಲ್ಲಿ ಅಂತ ರೆಡಿ ಆಗುತ್ತಿದ್ದೆ, ಮೊಮಕ್ಕಳ ಜೊತೆ ಮೆನು ಡಿಸ್ಕಸ್ ಮಾಡ್ತಿರುವುದು ಕಣ್ಣಿಗೆ ಕಟ್ಟಿ ದ ಹಾಗಿದೆ.

ನೀನು ಸ್ನಾನ ಮಾಡಿ ದೇವರ ಎಲ್ಲ ಫೋಟೋಗಳಿಗೆ ದಾಸವಾಳ ಮುಡಿಸಿ, ದೀಪ ಬೆಳಗಿಸಿ ಸುಮಾರು ಹೊತ್ತು ಮಂತ್ರ ಜಪಿಸುತ್ತ ಕುಳಿತಿದ್ದೆ. ನಂತರ ನಾನೇ ಬಂದು ಹೇಳಿದೆ ಜಾಸ್ತಿ ಅಡುಗೆ ಬೇಡ ಅಂತ. ಇಲ್ಲ ಬರೀ ಸಾರು ಪಲ್ಯ ಮಾಡ್ತೀನಿ ಅಂದೆ, ಸರಿ ಅಂತ ನಾನು ರೂಮ್‌ನಲ್ಲಿ ಕೆಲಸ ಮುಂದುವರೆಸಿದೆ. ಸುಮಾರು 1.30ಕ್ಕೆ ಮತ್ತೆ ನಿನ್ನ ಬಳಿ ಬಂದು ಹರಿಣಿ ಆಂಟಿಗೆ ಫೋನ್ ಮಾಡ್ಬೇಕು ಅಂದಾಗ ಟೀ ಟೈಮ್ ಸಂಜೆ ಮಾಡೋಣ ಅಂದೆ. ಆಗ ನೀನು ಇಂಗು ಒಗ್ಗರಣೆ ಕೊಡ್ತಾ ಇದ್ದೆ. ಅದೇ ನಾನು ನಿನ್ನ ಜೊತೆ ಕೊನೆಬಾರಿ ನೇರ ಮಾತನಾಡಿದ್ದು.

ನಂತರ ರೂಂನಿಂದ ನಿನ್ನ ನೋಡಿದಾಗ ಹಾಲ್‌ನಲ್ಲಿ ಇದ್ದ ಸೋಫಾ ಮೇಲೆ 2 ದಿಂಬುಗಳನ್ನು ಇಟ್ಟು ಮಲಗುತಿದ್ದೆ. ಯಾಕೆ ಮಧ್ಯಾಹ್ನ ಸದ ಬಹಾರ್‌ನಲ್ಲಿ ಸಿನೆಮಾ ನೋಡುತಿಲ್ಲವಲ್ಲ ಅಂದೆನಿಸಿತ್ತು. ಫ್ಯಾನ್ ಹಾಕಿ ಸೆಕೆ ಜಾಸ್ತಿ ಅಂತ ಮಲಗಿದ್ದಾರೇನೊ ಅನಿಸಿತ್ತು. ಸರಿ ಮಲಗಲಿ 15 ನಿಮಿಷ ಬಿಟ್ಟು ಎಬ್ಬಿಸೋಣ ಅಂದುಕೊಂಡೆ. ಆದರೆ ಅಮ್ಮ ಆ ಸಮಯದಲ್ಲಿ ನೀನು ನಿನ್ನ ಕೊನೆ ಪ್ರಯಾಣಕ್ಕೆ ಸಿದ್ಧವಾಗಿದ್ದೆ ಅಂತ ಗೊತ್ತಾಗಲಿಲ್ಲ . ಸ್ವಿಚ್ ಆನ್ /ಆಫ್ ಆಗುವುದರಲ್ಲಿ ನೀನು ಇಲ್ಲ ಅದು ಹೇಗೆ ? ಸಿನೆಮಾದಲ್ಲಿ ಸ್ಟಾಪ್ ಬ್ಲಾಕ್‌ಲಿ ಮಾಯವಾದಂತೆ. ತಿಳಿದವರು ಹೇಳ್ತಾರೆ ಶರಣರನ್ನು ಮರಣದಲ್ಲಿ ಕಾಣು ಅಂತ, ಆದರೆ ಹೀಗೆ ತಕ್ಷಣ ನಮ್ಮನ್ನ ಬಿಟ್ಟು ಹೋದರೆ ನಾನು ಹೇಗೆ ಬಾಳಲಿ, ಸಂಕಟ ತಡೆಯಲಾರೆ.ಕಾಲ ಮರೆಸುತ್ತೆ ಅಂತಾರೆ, ಇಲ್ಲ ಇದು ನಿರಂತರ. ನಿನ್ನಷ್ಟು ಡಿಸಿಪ್ಲಿನ್, ಜೀವನ ಉತ್ಸಾಹ ನನ್ನಲಿ ಇಲ್ಲ. ಆದ್ರೆ ಇನ್ನೂ ಮುಂದೆ ಕಲಿತೀನಿ ನಿನ್ನ ಹಾಗೆ ಬದುಕುವುದನ್ನು. ಪ್ರಾಮೀಸ್! ನಿನ್ನನ್ನು ನನ್ನಲ್ಲಿ ನೋಡುವಂತೆ ಮಾಡ್ತೀನಿ.

ಓಂ ಶಾಂತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top