fbpx
ಸಮಾಚಾರ

ಸಿನಿಮಾ ಸೋತಿವೆ, ಸೀರಿಯಲ್ ಬಿಟ್ಟು ಓದಿ ಸರ್ಕಾರ ಕೆಲಸ ಗಿಟ್ಟಿಸಿಕೊಳ್ಳಿ ಎಂದವನಿಗೆ ಖಡಕ್ ಉತ್ತರ ನೀಡಿದ ನಟಿ ಕೃತಿಕಾ!

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇದೀಗ ‘ರಾಧಾ ಕಲ್ಯಾಣ’ ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ಕೂಡಾ ಇಂಥಾದ್ದೇ ಕಿರಿಕಿರಿಗೀಡಾಗಿದ್ದಾರೇ.

 

 

ನೆಟ್ಟಿಗರ ಕಾಮೆಂಟ್:
‘ಸೀರಿಯಲ್ ಅಥವಾ ಸಿನಿಮಾ ಶಾಶ್ವತವಲ್ಲ. ಇವೆಲ್ಲಾ ತಾತ್ಕಾಲಿಕ. ನೀವು ಅಭಿನಯಿಸಿದ್ದು 2-3 ಸಿನಿಮಾಗಳು ಮಾತ್ರ. ನಿಮ್ಮ ಸಿನಿಮಾಗಳು ಫ್ಲಾಪ್ ಆಗಿವೆ. ನೀವು ಅದನ್ನೇ ನಂಬಿಕೊಂಡು ಕೂರುವುದು ತಪ್ಪು. ಈಗಿನ ದಿನಗಳಲ್ಲಿ ಸಿನಿಮಾ ಸುಲಭವಲ್ಲ. ಅದೆಷ್ಟೋ ನಟಿಯರು ಬಂದು ಹೋಗುತ್ತಾರೆ. ನೀವು ಸರ್ಕಾರಿ ಪರೀಕ್ಷೆ ಬರೆದು ಜೀವನದಲ್ಲಿ ಸೆಟಲ್ ಆಗಿ. ಐಎಎಸ್‌, ಐಪಿಎಸ್‌ ಅಥವಾ ಕೆಎಎಸ್‌ ಅಧಿಕಾರಿಯಾಗಿ,’ ಎಂದಿದ್ದಾರೆ.

 

 

ಕೃತಿಕಾ ಪ್ರತಿಕ್ರಿಯೆ:
‘ಇದು ನನ್ನ ವೈಯಕ್ತಿಕ ಆಯ್ಕೆ. ಸರ್ಕಾರಿ ಕೆಲಸ ಮಾತ್ರ ಸೇಫ್‌ ಎಂದು ಹೇಳುವುದು ತಪ್ಪಾಗುತ್ತದೆ. ಈ ಭೂಮಿ ಮೇಲೆ ನಮ್ಮ ಇರುವಿಕೆಯೇ ಶಾಶ್ವತವಲ್ಲ ಅಂಥದ್ರಲ್ಲಿ ನೀವು ನನಗೆ ಕೆಲಸದ ವಿಚಾರ ಬಗ್ಗೆ ಹೇಳುತ್ತೀರಾ? ನಾನು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಬಹುದು, ಏನೆಂದರೆ ನನ್ನ ಎಷ್ಟು ಸಿನಿಮಾಗಳು ಬಿಡುಗಡೆಯಾಗಿವೆ ಅನ್ನೋದು ನಿಮಗೆ ಗೊತ್ತಿಲ್ಲ. ಏನೋ ಗೊತ್ತಿಲ್ಲದೇ ನನ್ನ ಚಿತ್ರರಂಗದ ಇರುವಿಕೆ ಬಗ್ಗೆ ನೀವು ನಿರ್ಧರಿಸುವ ಅಗತ್ಯವಿಲ್ಲ. ನಾನು ನಿಮ್ಮ ಕೆಲಸದ ಬಗ್ಗೆ ಮಾತನಾಡಿಲ್ಲ ನೀವು ನನ್ನ ಚಿತ್ರರಂಗದ ಬಗ್ಗೆ ಮಾತನಾಡಿಬೇಡಿ. ಇಷ್ಟೆಲ್ಲಾ ಹೇಳಿದ ಮೇಲೆ ಅರ್ಥ ಆಗುತ್ತೆ ಎಂದು ಅಂದುಕೊಂಡಿರುವೆ,’ ಎಂದು ಕೃತಿಕಾ ಉತ್ತರ ನೀಡಿದ್ದಾರೆ.

ಕೃತಿಕಾ ರವೀಂದ್ರ ಪೋಸ್ಟ್ ಹೀಗಿದೆ
ಎಲ್ಲರ ಹಾಗೆ ಕನಸು ಕಂಡವಳು ನಾನು. ಗುರಿ ಎಂದೂ ಕಲಾವಿದೆ ಆಗಬೇಕೆಂಬುದಾಗಿರಲಿಲ್ಲ. ಓದುವ ಹುಚ್ಚು ನನಗೆ. ಕೂತಲ್ಲಿ ನಿಂತಲ್ಲಿ ಮಲಗಿದರೂ ಪುಸ್ತಕದ್ದೇ ಧ್ಯಾನ ಮಾಡುತ್ತಿದ್ದವಳು ನಾನು. ನನ್ನ ಕನಸು ದಕ್ಷ ಅಧಿಕಾರಿ ಆಗಬೇಕೆಂಬುದಾಗಿತ್ತು. ಅದಕ್ಕೆ ತಕ್ಕ ಹಾಗೆ ಸಿದ್ಧತೆಗಳನ್ನೂ ನಡೆಸಿದ್ದೆ. ಒಂದು ತರದಲ್ಲಿ ನಾನು ಕಲಾತ್ಮಕ ವಿಭಾಗದಲ್ಲಿ ನನ್ನ ಓದನ್ನು ಮುಗಿಸಿದ್ದೇ ಆ ಉದ್ದೇಶಕ್ಕಾಗಿ. ಆಕಸ್ಮಿಕವಾಗಿ ಕಲಾವಿದೆಯಾದೆ. ಕಲಾ ಸರಸ್ವತಿ ಬಾಚಿ ತಬ್ಬಿಕೊಂಡ ಕೂಡಲೇ ಕಲೆಯೇ ನನ್ನ ಬದುಕಾಯಿತು.

ಸೀರಿಯಲ್ ಸಿನಿಮಾ ಎನ್ನುವುದು ವೈಯಕ್ತಿಕ ಆಸಕ್ತಿ. ಈ ಪಯಣದಲ್ಲಿ ನಿರಂತರವಾಗಿ ಕಲಿತ ಪಾಠಗಳು ನನ್ನನ್ನು ತುಂಬಾ ಬದಲಿಸಿವೆ. ಒಂದು ಮರೆಯಲಾಗದ ನೆನಪು ಸೀರಿಯಲ್. ಒಂದು ಸುಂದರ ಕನಸು ಸಿನಿಮಾ. ಅಸಾಧ್ಯ ಖಂಡಿತಾ ಅಲ್ಲ. ಈ ಪಯಣದಲ್ಲಿ ನಮ್ಮ ಮೇಲೆ ನಮಗೆ ಅನುಮಾನ ಮೂಡುವುದು ತಪ್ಪಲ್ಲ.ಹಲವರು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲವೆಂದು ಹೀಗಳೆಯಬಹುದು. ಆದರೆ ಧೃತಿಗೆಡದಿದ್ದರೆ ಗೆಲುವು ಜೊತೆಗೂಡುತ್ತದೆ.

ಸಂಯಮ, ಶ್ರದ್ಧೆ ,ಗುರಿ ಬಹಳ ಅವಶ್ಯಕ. ಇದರ ಜೊತೆಗೆ ದೇವರ ಮೇಲೆ ನಂಬಿಕೆ ಇದ್ದರೆ ಸಾಕು. ಅವನೇ ಕೊಡುತ್ತಾನೆ. ಕೊಡುವವರೆಗೂ ಕಾಯುವಷ್ಟು ತಾಳ್ಮೆ ಇದ್ದರೆ ಸಾಕು. ಏಕೆಂದರೆ ಅವನು ಕೊಟ್ಟರೆ ಕೈತುಂಬಾ ಕೊಡುತ್ತಾನೆ. ಕಿತ್ತುಕೊಳ್ಳುವವರಿಂದ ನಮ್ಮನ್ನು ಕಾಯುತ್ತಾನೆ. ಯಾಕೆ ಇಷ್ಟೆಲ್ಲಾ ಹೇಳ್ದೆ ಅಂದ್ರೆ, ಒಂದು ಸಕಾರಾತ್ಮಕ ಚಿಂತನೆ ಒಂದು ಆತ್ಮವನ್ನ ಗಟ್ಟಿಗೊಳಿಸತ್ತೆ. ನಾವು ಏನಾದರೂ ಆಗಬಹುದು. ಆದರೆ ಮನುಷ್ಯರಾಗಿರೋದು ಮುಖ್ಯ. ಒಂದಂತೂ ನಿಜ ಆಗುವುದೆಲ್ಲ ಒಳ್ಳೆಯದಕ್ಕೆ ಆಗಿದೆ. ಮುಂಬರುವ ದಿನಗಳೆಲ್ಲವೂ ಒಳ್ಳೆಯದೇ. ಈಗಿನ ಪರಿಸ್ಥಿತಿ ಕೆಟ್ಟಿರಬಹುದು. ಎಲ್ಲ ದಿನಗಳೂ ಹೀಗೆ ಇರೋದಿಲ್ಲ. ನಂಬಿಕೆ ಇರಲಿ. ಧೈರ್ಯಮ್ ಸರ್ವತ್ರ ಸಾಧನಂ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top