fbpx
ಸಮಾಚಾರ

ಆಕ್ಸಿಜನ್ ನೆರವು ಕೇಳಿದ ಸುರೇಶ್ ರೈನಾಗೆ ಹತ್ತು ನಿಮಿಷಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಳುಹಿಸಿದ ಸೋನು ಸೂದ್!

ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ಭಾರತ ಅಕ್ಷರಶಃ ತತ್ತರಿಸಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಇಲ್ಲದೆ ಸೋಂಕಿತರು ನರಳಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನೇಕರಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ಅವಶ್ಯವಿರುವವರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್ ಹಾಗೂ ಇಂಜೆಕ್ಷನ್‌ಗಳನ್ನು ತಲುಪಿಸಿ ಹಲವರ ಜೀವ ಉಳಿಸುವ ಕಾಯಕದಲ್ಲಿ ಸೋನು ಸೂದ್ ತೊಡಗಿದ್ದಾರೆ. ಇದೀಗ ಕ್ರಿಕೆಟರ್ ಸುರೇಶ್ ರೈನಾಗೂ ಸೋನು ಸಹಾಯ ಹಸ್ತ ಚಾಚಿದ್ದಾರೆ.

 

 

ಟ್ವಿಟ್ಟರ್‌ನಲ್ಲಿ ಸುರೇಶ್ ರೈನಾ ಉತ್ತರ ಪ್ರದೇಶ್ ಮೀರತ್‌ನಲ್ಲಿರುವ ಕುಟುಂಬಸ್ಥರೊಬ್ಬರಿಗೆ ಅಗತ್ಯವಾಗಿ ಆಕ್ಸಿಜನ್ ಸಿಲಿಂಡರ್‌ನ ಅಗತ್ಯವಿದೆ ಎಂದು ಬರೆದುಕೊಂಡು ವಿವರಗಳನ್ನು ನೀಡಿದ್ದರು. ಸಹಾಯ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೂಡ ಉಲ್ಲೇಖಿಸಿದ್ದರು.

ಇದಕ್ಕೆ ನಟ ಸೋನು ಸೂದ್ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯೆ ನೀಡಿದರು. “ಪೂರಕ ಮಾಹಿತಿಯನ್ನು ನೀಡಿ ನಾನು ತಲುಪಿಸುತ್ತೇನೆ” ಎಂದು ಸೋನು ಸೂದ್ ಟ್ವೀಟ್‌ನಲ್ಲಿ ಉತ್ತರಿಸಿದರು. ಅದಾದ ಬಳಿಕ ಸೋನು ಸೂದ್ ಮತ್ತೊಂದು ಟ್ವೀಟ್‌ನಲ್ಲಿ “ಹತ್ತು ನಿಮಿಷಗಳಲ್ಲಿ ತಲುಪಲಿದೆ” ಎಂದು ತಿಳಿಸಿದ್ದಾರೆ.

ತಮ್ಮ ಕಷ್ಟಕಾಲದಲ್ಲಿ ನೆರವು ನೀಡಿದ ನಟನ ಕಾರ್ಯಕ್ಕೆ ಮನಸಾರೆ ಧನ್ಯವಾದ ಅರ್ಪಿಸಿದ ಸುರೇಶ್​ ರೈನಾ, ನಿಮ್ಮಿಂದ ಅತಿದೊಡ್ಡ ಸಹಾಯ ಸಿಕ್ಕಿದೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top