fbpx
ಸಮಾಚಾರ

“ಮತ್ತೆ ಎದ್ದು ಬರುತ್ತೇನೆಂಬ ಗ್ಯಾರಂಟಿಯೇ ಇರಲಿಲ್ಲ” ಕೊರೊನಾ ಗೆದ್ದ ಸುದೀಪ್​ ಕೊರೋನಾ ಭೀಕರತೆ ಬಗ್ಗೆ ಹೇಳಿದ್ದಿಷ್ಟು

ಕಳೆದ ಮೂರು ವಾರಗಳಿಂದ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ. ಕಾರಣ ಅವರ ಅನಾರೋಗ್ಯ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಸುದೀಪ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೋವಿಡ್ ಅನುಭವದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್ ಕ್ವಾರಂಟೈನ್ ಹಾಗೂ ಚಿಕಿತ್ಸೆಯ ಕ್ರಮ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ.

“ನನ್ನ ಆರೋಗ್ಯ ಸಮಸ್ಯೆ ಕಾರಣ ಏನೆಂಬುದು ಹಲವರಿಗೆ ಗೊಂದಲ ಇತ್ತು. ಈ ಸಮಯದಲ್ಲಿ ಕೊರೋನಾ ಬಿಟ್ಟು ಬೇರೆ ಯಾವುದು ನಮ್ಮನ್ನು ಬಾಧಿಸುತ್ತದೆ ಹೇಳಿ. ಕೊರೋನಾಗೆ ನಾನು ಯಾರು ಅನ್ನೋದು ಮುಖ್ಯ ಆಗಲ್ಲ. ಸೂಪರ್ ಮ್ಯಾನ್, ಬ್ಯಾಟ್‌ಮ್ಯಾನ್ ಯಾರೇ ಆಗಲಿ ಈ ನೋವು, ಸಂಕಷ್ಟದ ಮುಂದೆ ನಾವು ಯಾರೂ ಸೂಪರ್ ಅಲ್ಲ. ಮನುಷ್ಯರು ಅಷ್ಟೆ.”

“ನಾನು ಮತ್ತೆ ಎದ್ದು ಬರಲು ಆಗುತ್ತಾ, ನನ್ನ ಪ್ರೀತಿಸುವವರನ್ನು ನೋಡುತ್ತೇನೆಯೇ, ಸ್ನೇಹಿತರ ಜತೆ ಮತ್ತೆ ಮಾತನಾಡುತ್ತೇನಾ, ನನ್ನ ಮನೆ, ಸಿನಿಮಾ, ಬಂಧು- ಬಳಗ ಎಲ್ಲವೂ ಮತ್ತು ಎಲ್ಲರ ಜತೆ ಮತ್ತೆ ಮಾತಾಡಲು ಆಗುತ್ತದೆಯೇ… ಇದು ನಾನು ಹಾಸಿಗೆ ಹಿಡಿದಾಗ ಬಂದ ಯೋಚನೆ. ಒಂದು ಕ್ಷಣ ಈ ಎಲ್ಲವೂ ನನ್ನ ಪಾಲಿಗೆ ಇಲ್ಲ ಅನಿಸಿದ್ದು ಹೌದು. ಭಯ ಆಯಿತು.” ಎಂದು ಸುದೀಪ್ ಹೇಳಿದ್ದಾರೆ

‘ಎಲ್ಲ ಬಗೆಯ ಸುದ್ದಿಗಳು ನಮ್ಮ ಕಿವಿಗೆ ಬೀಳುತ್ತಿತ್ತು. ಪರಿಸ್ಥಿತಿ ತುಂಬ ಅನಿಶ್ಚಿತವಾಗಿತ್ತು. ಹುಷಾರಾಗೋಕೆ ತುಂಬ ಸಮಯ ಆಗುತ್ತಿದೆ ಎಂದಾಗ ನಮ್ಮ ಮನಸ್ಥಿತಿ ಎಷ್ಟು ಗಟ್ಟಿಯಾಗಿದೆ ಎಂಬುದು ಅವಾಗಲೇ ಗೊತ್ತಾಗೋದು. ನನಗೂ ಭಯ ಆಗುತ್ತಿತ್ತು’ ಎಂದು ಆ ದಿನಗಳ ಕಷ್ಟವನ್ನು ಮೆಲುಕು ಹಾಕಿದ್ದಾರೆ.

ಕೊರೋನಾ ರೋಗಿಗಳಿಗೆ ಸಲಹೆ:
‘ಹೃದಯ ಬಡಿತ ಹೆಚ್ಚಿಸುವಂತಹ ಯಾವುದೇ ಕೆಲಸ ಮಾಡಬಾರದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಬೇಕು, ಹೊಟ್ಟೆ ತುಂಬಾ ಊಟ ಮಾಡಬೇಕು. ಏಕಂದ್ರೆ ದೇಹಕ್ಕೆ ಶಕ್ತಿ ಬೇಕು. ಅದರ ಜೊತೆಗೆ ವೈದ್ಯರು ಸಲಹೆ ಪಾಲಿಸಬೇಕು’ ಎಂದು ಸುದೀಪ್ ಕೋವಿಡ್ ರೋಗಿಗಳಿಗೆ ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top