fbpx
ಸಮಾಚಾರ

ಕನ್ನಡ ಭಾಷೆಗೆ ತೀವ್ರ ಅಪಮಾನ ಮಾಡಿದ ಲೋಕಸಭೆ ಸಚಿವಾಲಯ: ಕನ್ನಡಿಗರ ಆಕ್ರೋಶ

ಕನ್ನಡ ಭಾಷೆ ಮತ್ತು ಕರ್ನಾಟಕದ ಮೇಲೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತೋರುತ್ತಿರುವ ವಿಷಯ ಈಗ ಹೆಚ್ಚು ಗುಟ್ಟಾಗಿ ಉಳಿದಿಲ್ಲ. ಅನುದಾನ ಬಿಡುಗಡೆ, ತೆರಿಗೆ ಹಂಚಿಕೆ, ಪರಿಹಾರ ಇನ್ನೂ ಮುಂತಾದ ಗಂಭೀರ ವಿಚಾರಗಳಲ್ಲಿ ಕೇಂದ್ರವು ನಮ್ಮ ರಾಜ್ಯಕ್ಕೆ ಅನ್ಯಾಯವೆಸಗುತ್ತಲೇ ಬಂದಿದೆ. ಕರ್ನಾಟಕದ ತುಂಬೆಲ್ಲಾ ಹಿಂದಿ ಹೇರಿಕೆ ಮಾಡಿ ಕನ್ನಡ ಭಾಷೆ ಕಡೆಗಣಿಸುವ ಕೇಂದ್ರವು ಈಗ ಮತ್ತೊಮ್ಮೆ ಕನ್ನಡ ಭಾಷೆಗೆ ಅಪಮಾನ ಮಾಡಿದೆ.

 

 

ಲೋಕಸಭಾ ಸಚಿವಾಲಯದ ಅಡಿಯಲ್ಲಿ ಬರುವ ‘ಪಾರ್ಲಿಮೆಂಟರಿ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಸಂಸ್ಥೆಯು ಸಂಸತ್ತಿನ ಸದಸ್ಯರು, ರಾಜ್ಯ / ಕೇಂದ್ರಾಡಳಿತ ಪ್ರದೇಶದ ಶಾಸಕರು, ಅಧಿಕಾರಿಗಳಿಗೆ ವಿದೇಶದ ಆರು ಭಾಷೆಗಳು ಹಾಗೂ ಭಾರತೀಯ ಆರು ಭಾಷೆಗಳನ್ನು ಕಲಿಸಲು ಮುಂದಾಗಿದೆ. ಆನ್‌ಲೈನ್ ಮೂಲಕ ಇದೇ 22ರಿಂದ 6 ವಿದೇಶಿ ಭಾಷೆಗಳು, 6 ದೇಶಿಯ ಭಾಷೆಗಳ ಕಲಿಕಾ ತರಬೇತಿಯನ್ನು ಪ್ರಾರಂಭಿಸುತ್ತಿದೆ.

ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಕಲಿಸಲಾಗುತ್ತಿದೆ. ಇನ್ನೊಂದೆಡೆಗೆ ಭಾರತೀಯ ಭಾಷೆಗಳಲ್ಲಿ ಪ್ರಮುಖವಾಗಿ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಮಾತ್ರ ಮಣೆ ಹಾಕಲಾಗಿದೆ.ದಕ್ಷಿಣ ಭಾರತದಿಂದ ತಮಿಳು ಮತ್ತು ತೆಲುಗು ಭಾಷೆಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಿ ಕನ್ನಡ ಭಾಷೆ ಯನ್ನು ಕಡೆಗಣಿಸಲಾಗಿದೆ, ಈಗ ಲೋಕಸಭಾ ಸಚಿವಾಲಯದ ಈ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

‘ಕೇಂದ್ರ ಸರ್ಕಾರದಿಂದ ಶಾಸ್ತ್ರಿಯ ಭಾಷೆಯ ಸ್ಥಾನಮಾನ ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಸುದೀರ್ಘ ಇತಿಹಾಸ ಇರುವ ಕನ್ನಡ ಭಾಷೆಯನ್ನು ಲೋಕಸಭಾ ಸಚಿವಾಲಯ ಕಡೆಗಣಿಸಿರುವುದು ವಿಷಾದನೀಯ. ಈ ಬಗ್ಗೆ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಒತ್ತಾಯಿಸಬೇಕು’ ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

ಈ ವಿಚಾರವನ್ನು ಉಗ್ರವಾಗಿ ಖಂಡಿಸಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಕನ್ನ್ನಡ ಭಾಷೆಯನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. “ಪಾರ್ಲಿಮೆಂಟರಿ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಭಾಷೆಗಳ ಕಲಿಕೆಯ ಪಟ್ಟಿಯಿಂದ ಕನ್ನಡ ಭಾಷೆಯನ್ನು ಸೇರಿಸದೆ ಇರುವುದು ಬೇಸರದ ಸಂಗತಿ. ‘ಲಿಪಿಗಳ ರಾಣಿ’ ಎಂದು ಕರೆಯಲ್ಪಡುವ ಕನ್ನಡ ಭಾಷೆಯನ್ನು ಪಟ್ಟಿಯಲ್ಲಿ ಸೇರಿಸಬೇಕು” ಎಂದು ಟ್ವೀಟ್ ಮಾಡಿದ್ದರು.

 

 

ಒಟ್ಟಿನಲ್ಲಿ ಪಾರ್ಲಿಮೆಂಟರಿ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಅಧಿಕಾರಿಗಳು ನಮ್ಮ ಭಾಷೆಯನ್ನು ಕಡೆಗಣಿಸಿ, ಕನ್ನಡಿಗರನ್ನು ಅವಮಾನಿಸಿದ್ದಾರೆ. ಭಾರತೀಯ ಭಾಷೆಗಳ ಆಯ್ಕೆಯ ಹಿಂದಿರುವ ತಾತ್ವಿಕತೆಯನ್ನು ಪ್ರಶ್ನಿಸುವ ಹಕ್ಕು ಎಲ್ಲ ಭಾರತೀಯರಿಗಿದ್ದು, ಕನ್ನಡಿಗರು ಸಾಮಾಜಿಕ ಜಾಲ ತಾಣಗಳ ಮೂಲಕ ಇದನ್ನು ಪ್ರಶ್ನಿಸಬೇಕಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top