fbpx
ಸಮಾಚಾರ

ರಾಮು ಹುಟ್ಟುಹಬ್ಬ; ಅಗಲಿದ ಪತಿ ನೆನಪಿನಲ್ಲಿ ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

ಕೋವಿಡ್‌19 ಸೋಂಕಿನಿಂದ ನಿಧನರಾದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರ ಹುಟ್ಟುಹಬ್ಬದಂದು ನಟಿ ಮಾಲಾಶ್ರೀ ಭಾವನಾತ್ಮಕ ಪತ್ರ ಬರೆದಿದ್ದಾರೆ. ಪತಿಗೆ ಭಾವುಕವಾಗಿ ಪತ್ರ ಬರೆದಿರುವ ಮಾಲಾಶ್ರೀ ಅವರು, ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

 

 

‘ನನ್ನ ಆತ್ಮವೇ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ನನಗೆ ದೇವರ ವರವಾಗಿ ಬಂದ್ರಿ. ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ. ಈ ದಿನ ನನ್ನ ದೇವರ ಹುಟ್ಟುಹಬ್ಬ. 23 ವರ್ಷಗಳ ಕಾಲ ಈ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸಿ, ನನ್ನ ಉಸಿರಲ್ಲಿ ಉಸಿರಾಗ್ತಾ ಬಂದ್ರಿ. ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ. ನನ್ನ ನುಡಿ, ನಗು, ನೆಮ್ಮದಿ ನೀವಾಗಿದ್ರಿ. ನನ್ನ ಹೆಸರಿಗೆ ಬೆಳಕಾಗಿದ್ರಿ’ ಎಂದು ಪತಿಯನ್ನು ಮಾಲಾಶ್ರೀ ನೆನದಿದ್ದಾರೆ.

‘ದಿನ ರಾತ್ರಿ ನನ್ನ ಆಗುಹೋಗುಗಳನ್ನು ಆಲಿಸಿ, ನನಗೆ ಬುದ್ಧಿ ಹೇಳಿ ಬದುಕಿಗೆ ಬುನಾದಿ ಕಟ್ಟಿಕೊಟ್ಟ ಗುರುಗಳಾಗಿದ್ರಿ. ಮಕ್ಕಳ ಜೀವನವನ್ನು ಹಸನಾಗಿ ರೂಪಿಸಿದ ಪರ್ಫೆಕ್ಟ್​ ತಂದೆ ಆಗಿದ್ರಿ. ನೀವು ದೂರವಾದ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೇ ಇವೆ. ನಿಮ್ಮನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮಾಲಾಶ್ರೀ ಪತ್ರದಲ್ಲಿ ಬರೆದಿದ್ದಾರೆ.

‘ನನಗಾಗಿ ಜನ್ಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನು ಬೇಕೋ ಅದನ್ನೆಲ್ಲ ಕೊಟ್ಟವರು ನೀವು. ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿರೀ.. ಎಂದೆಂದಿಗೂ ನಿಮ್ಮನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ಸದಾ ನಿಮ್ಮನ್ನು ಪ್ರೀತಿಸುತ್ತೇವೆ’ ಎಂದು ಮಾಲಾಶ್ರೀ ಭಾವುಕವಾಗಿ ಪತ್ರವನ್ನು ಬರೆದಿದ್ದಾರೆ. ಜೊತೆಗೆ ರಾಮು ಜೊತೆಗಿನ ಅಪರೂಪದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top