fbpx
ಸಮಾಚಾರ

ತೆರಿಗೆ ಕಟ್ಟಲು ಹಣವಿಲ್ಲ ಎಂದ ನಟ ಜೋಸೆಫ್ ವಿಜಯ್‍ಗೆ ಕೋರ್ಟ್ ಛೀಮಾರಿ

ತಮಿಳಿನ ಖ್ಯಾತ ನಟ ವಿಜಯ್ ತಮ್ಮ ಕಾರನ್ನು ವಿದೇಶದಿಂದ ಆಮದು ಮಾಡಿಕೊಳ್ಳುವಾಗ ಆಮದು ಸುಂಕವನ್ನು ಕಟ್ಟದೇ, ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಿದ್ದಕ್ಕೆ ನ್ಯಾಯಾಲಯವು ನಟನಿಗೆ ಛಾಟಿಯನ್ನು ಬೀಸಿದೆ. ಜೊತೆಗೆ ನಿಜ ಜೀವನದ ನಡಾವಳಿಗಳ ಕುರಿತು ಕಿವಿಮಾತನ್ನೂ ಹೇಳಿದೆ.

ವಿಜಯ್ ಅವರ ಬಳಿ ದುಬಾರಿ ಬೆಲೆಯ ಹಲವು ಕಾರುಗಳಿವೆ. ಅದಕ್ಕೆ ಇತ್ತೀಚೆಗೆ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಸೇರ್ಪಡೆಯಾಗಿತ್ತು. ಅದೂ ಸಹ ರೋಲ್ಸ್ ರಾಯ್ಸ್ ಘೋಸ್ಟ್ ಮಾದರಿಯ ಕಾರು. ಆ ಕಾರನ್ನು ಇಂಗ್ಲೆಂಡ್‍ನಿಂದ ಆಮದು ಮಾಡಿಕೊಂಡಿದ್ದ ವಿಜಯ್‍ಗೆ ಭಾರತದಲ್ಲಿ ತೆರಿಗೆ ಕಟ್ಟಲು ಮನಸ್ಸಾಗಲಿಲ್ಲ. ಹಾಗಾಗಿ ಮದ್ರಾಸ್ ಹೈಕೋರ್ಟ್‍ಗೆ ವಿಜಯ್ ತೆರಿಗೆ ವಿನಾಯಿತಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಟನಿಗೆ ಛೀಮಾರಿ ಹಾಕಿದೆ.

ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದೆ. ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್‍ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.

ಇಂಗ್ಲೆಂಡ್‍ನಿಂದ ತರಿಸಿದ ರೋಲ್ಸ್ ರಾಯ್ಸ್ ಮಾದರಿಯ ಕಾರಿಗೆ ಭಾರತದಲ್ಲಿ ಆಮದು ಸುಂಕವನ್ನು ಕಟ್ಟದೇ ಅದರ ವಿರುದ್ಧವಾಗಿ ವಿಜಯ್ ಅವರು ಕೋರ್ಟ್‍ನ ಮೆಟ್ಟಿಲೇರಿದ್ದರು. ಅದನ್ನು ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top