fbpx
ಸಮಾಚಾರ

ಒಂದೇ ರಸ್ತೆಯಲ್ಲಿ ಹಾಲಿ ಸಿಎಂ ಸೇರಿ ಮೂವರು ಮಾಜಿ ಸಿಎಂಗಳ ಮನೆ

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದ ವಾರಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆಬಿದ್ದಿದೆ.

ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಒಂದು ಸ್ವಾರಸ್ಯಕರ ವಿಚಾರವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಬೆಂಗಳೂರಿನ ಒಂದೇ ರಸ್ತೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಮತ್ತು ಒಬ್ಬರು ಹಾಲಿ ಮುಖ್ಯಮಂತ್ರಿ ಅವರ ನಿವಾಸಗಳಿವೆ.

ಬೆಂಗಳೂರಿನ ಆರ್.ಟಿ.ನಗರದ ತರಳಬಾಳು ಮುಖ್ಯರಸ್ತೆಯು ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಮುಖ್ಯಮಂತ್ರಿಗಳ ನಿವಾಸಗಳನ್ನು ಹೊಂದಿದೆ. ಹೌದು, ಆರ್.ಟಿ.ನಗರದ ತರಳಬಾಳು ರಸ್ತೆಯುದ್ದಕ್ಕೂ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡುರಾವ್, ವೀರಪ್ಪಮೊಯ್ಲಿ ಅವರ ನಿವಾಸಗಳಿದ್ದು, ಹಿಂದೆ ಧರ್ಮಸಿಂಗ್ ಕೂಡ ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ಹೊಸದಾಗಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕೂಡ ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ಮೊದಲು ಸಿಗುವುದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಮನೆ, ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡುರಾವ್ ಅವರ ನಿವಾಸವಿದೆ. ಅದರ ಪಕ್ಕದಲ್ಲಿ ಧರ್ಮಸಿಂಗ್ ಅವರ ಮನೆಯಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾಗುವಾಗ ಅದೇ ನಿವಾಸದಲ್ಲಿ ವಾಸವಿದ್ದರು. ಬಳಿಕ ಸರ್ಕಾರಿ ನಿವಾಸಕ್ಕೆ ಸ್ಥಳಾಂತರಗೊಂಡರು.

ಧರ್ಮಸಿಂಗ್ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿ ಬಸವರಾಜ ಬೊಮ್ಮಾಯಿ ಅವರ ನಿವಾಸವಿದೆ. ಗೃಹ ಸಚಿವರಾಗಿದ್ದರೂ ಹೆಚ್ಚು ಆಡಂಬರ ಇಲ್ಲದೆ ಬೊಮ್ಮಾಯಿ ವಾಸಿಸುತ್ತಿದ್ದಾರೆ… ಅಲ್ಲಿಗೆ ಹಾಲಿ ಸಿಎಂ ಸೇರಿ ಮೂವರು ಮಾಜಿ ಸಿಎಂಗಳ ಮನೆಗಳು ಒಂದೇ ರಸ್ತೆಯಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top