fbpx
ಸಮಾಚಾರ

ಕುಕ್ಕೆ, ಧರ್ಮಸ್ಥಳ, ಕಟೀಲ್‍ನಲ್ಲಿ ದರ್ಶನಕ್ಕೆ ಮಾತ್ರ ಅವಕಾಶ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಕೋವಿಡ್-19 ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಮುಖ್ಯವಾಗಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಈ ಕ್ಷೇತ್ರಗಳಲ್ಲಿ ಮುಂದಿನ ಆದೇಶದವರೆಗೆ ಭಕ್ತಾಧಿಗಳಿಗೆ ದೇವರ ಸೇವೆಯನ್ನು ನಿಷೇಧಿಸಲಾಗಿದೆ.

ಆ.5ರಿಂದ ಆ.15ರವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂದರ್ಭ ತೀರ್ಥ ಪ್ರಸಾದ, ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಏಕ ದ್ವಾರದ ಮೂಲಕ ಪ್ರವೇಶ: ದೇವಳದ ಮುಂಭಾಗದಲ್ಲಿ ಕಡ್ಡಾಯ ವಾಗಿ ದೇಹದ ಉಷ್ಣತೆ ತಪಾಸಣೆ ಮಾಡಲಾಗುವುದು. ಅಲ್ಲದೆ, ಒಳ ಪ್ರವೇಶಿಸು ವಾಗ ಸ್ಯಾನಿಟೈಸರ್ ನೀಡಲಾಗುವುದು. ಜ್ವರ, ಕೆಮ್ಮು, ಶೀತವಿರುವ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮುಖವಾಗಿ ತುಲಾಭಾರ ಸೇವೆ, ಹರಕೆ ಮುಡಿ, ಸೇವೆಗಳಿಗೆ ಅತೀ ಹೆಚ್ಚಿನ ಭಕ್ತರು ನೋಂದಾವಣಿ ಮಾಡುತ್ತಿದ್ದು, ಈಗ ಆ ಎರಡೂ ಸೇವೆಗಳು ಸ್ಥಗಿತಗೊಳ್ಳಲಿದೆ. ಇನ್ನೂ ಶಿವನಿಗೆ ಅತ್ಯಂತ ಪ್ರಿಯವಾದ ರುದ್ರಾಭಿಷೇಕ, ಶತ ರುದ್ರಾಭಿಷೇಕ ಮತ್ತು ಸರ್ವ ಸೇವೆಗಳೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸ್ಥಗಿತಗೊಳ್ಳಲಿದೆ. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದೆ‌.

ಇನ್ನು ಅನ್ನಛತ್ರ, ದರ್ಶನ ವ್ಯವಸ್ಥೆ, ನೇತ್ರಾವತಿ ನದಿಯ ಸ್ನಾನ ಘಟ್ಟದಲ್ಲೂ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಲ್ಲಿ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top