fbpx
ಸಮಾಚಾರ

ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿ ಸ್ನೇಹಿತನಿಗೆ ಅವಕಾಶ ಕೊಡಿಸಿದ್ದ ಸುದೀಪ್: ಫಿನಾಲೆಯಲ್ಲಿ ಹಳೆ ನೆನಪು ಮೆಲುಕು ಹಾಕಿದ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 8ರ​ ಫಿನಾಲೆ ಪೂರ್ಣಗೊಂಡಿದೆ. ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 8 ಅದ್ದೂರಿ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮಂಜು ಪಾವಗಡ ಅವರ ಕೈಯನ್ನು ಮೇಲೆತ್ತಿದರು. ಈ ಮೂಲಕ ಮಂಜು ವಿನ್ನರ್​ ಅನ್ನೋದನ್ನು ಸುದೀಪ್​ ಘೋಷಿಸಿದರು.

ಇದಕ್ಕೂ ಮುನ್ನ ವೇದಿಕೆ ಮೇಲೆ ಸ್ಪರ್ದಿಗಳು ಡ್ಯಾನ್ಸ್ ಮೂಲಕ ರಂಜಿಸಿದರು. ಈ ನಡುವೆ ಸುದೀಪ್​ ಅವರಿಗೆ ದೊಡ್ಡ ಸರ್ಪ್ರೈಸ್​ ಕಾದಿತ್ತು. ರಘು ದೀಕ್ಷಿತ ಹಾಗೂ ರಾಜೇಶ್ ಕೃಷ್ಣನ್ ಅವರು ವೇದಿಕೆಗೆ ಎಂಟ್ರಿ ಕೊಟ್ಟರು. ನಂತರ ಸುದೀಪ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಅವರಿಷ್ಟದ ಹಾಡುಗಳನ್ನು ಹಾಡುವ ಮೂಲಕ ನೆರದವರನ್ನು ರಂಜಿಸಿದ್ದಾರೆ. ಈ ವೇಳೆ ರಾಜೇಶ್​ ಕೃಷ್ಣನ್​ ಅವರು ತಮ್ಮ ಹಾಗೂ ಸುದೀಪ್ ಅವರ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡರು.

ನಂತರ ಸುದೀಪ್​ ಅವರು ಇದೇ ವೇದಿಕೆ ಮೇಲೆ ತಮ್ಮ ಹಾಗೂ ರಾಜೇಶ್​ ಕೃಷ್ಣನ್​ ಅವರ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ. ಆಗಲೇ ಹುಚ್ಚ ಸಿನಿಮಾದ ವೇಳೆ ನಡೆದಿದ್ದ ಒಂದು ಸಂಗತಿಯನ್ನು ಸುದೀಪ್ ಅವರು ಹಂಚಿಕೊಂಡಿದ್ದಾರೆ. ಹುಚ್ಚ ಸಿನಿಮಾದ ಸಮಯದಲ್ಲಿ ನಾನು ಏನೂ ಆಗಿರಲಿಲ್ಲ. ಆಗ ನನ್ನ ಮಾತು ಯಾರೂ ಕೇಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ​.

ಉಸಿರೆ ಉಸಿರೆ ಹಾಡನ್ನು ಸೋನು ನಿಗಂ ಹಾಡಿದ್ದರು. ಆದರೆ, ನನಗೆ ಯಾಕೋ ಅವರು ಹಾಡಿದ್ದು ಇಷ್ಟವಾಗಲಿಲ್ಲ. ಅವರಿಗೆ ಕನ್ನಡ ಗೊತ್ತಿಲ್ಲದೇ ಇದ್ದಿದ್ದಕ್ಕೋ ಏನೋ ಆ ಹಾಡಿನಲ್ಲಿ ಫೀಲಿಂಗ್ ಇರಲಿಲ್ಲ. ನಾನು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಬಳಿ ಇದೇ ವಿಷಯ ಹೇಳಿದೆ. ಆ ಕಾಲಕ್ಕೆ ಸೋನು ನಿಗಂ ದೊಡ್ಡ ಗಾಯಕ. ಅವರು ಹಾಡಿದ ಹಾಡನ್ನು ತೆಗೆದುಹಾಕುವುದು ಸಣ್ಣ ವಿಷಯವೇನಾಗಿರಲಿಲ್ಲ. ಆದರೆ, ಆ ಹಾಡನ್ನು ನನ್ನ ಗೆಳೆಯ ರಾಜೇಶ್ ಕೃಷ್ಣನ್ ಬಳಿ ಹಾಡಿಸಿ ಎಂದು ರಾಜೇಶ್ ರಾಮನಾಥನ್ ಬಳಿ ಮನವಿ ಮಾಡಿದೆ. ರಾತ್ರಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಬಂದು ಹಾಡಿಸುತ್ತೇನೆ ಎಂದು ಹೇಳಿದೆ.

ಆಗ ಇನ್ನೂ ಫ್ರೆಷರ್ ಆಗಿದ್ದ ನನ್ನ ಮಾತಿಗೆ ಯಾವ ಬೆಲೆಯೂ ಇರಲಿಲ್ಲ. ಆದರೂ ರಾಜೇಶ್ ರಾಮನಾಥನ್ ನನ್ನ ಮಾತಿಗೆ ಒಪ್ಪಿ ರಾಜೇಶ್ ಕೃಷ್ಣನ್ ಅವರ ಬಳಿ ಹಾಡಿಸಲು ಒಪ್ಪಿದರು. ನೀವು ಬಂದಲ್ಲ, ಆ ದಿನದ ನನ್ನ ಪರಿಸ್ಥಿತಿ ಹೇಗಿತ್ತೆಂದರೆ ರಾಜೇಶ್ ಕೃಷ್ಣನ್ ಹಾಡಿದ್ದಕ್ಕೆ ಅವರಿಗೆ ಪೇಮೆಂಟ್ ಕೂಡ ಕೊಟ್ಟಿರಲಿಲ್ಲ. ಕೊಡಲು ನನ್ನ ಬಳಿ ಹಣವೂ ಇರಲಿಲ್ಲ. ಆದರೂ ನನ್ನ ಮೇಲಿನ ಸ್ನೇಹದಿಂದ ರಾಜೇಶ್ ಬಂದು ಹಾಡಿದರು. ಈಗಲೂ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿರುವ ಉಸಿರೆ ಉಸಿರೆ ಹಾಡು ನನ್ನ ಫೇವರೆಟ್ ಹಾಡು. ಎಂದು ಕಿಚ್ಚ ಸುದೀಪ್ ಉಸಿರೆ ಉಸಿರೆ ಹಾಡಿನ ಕುರಿತಾದ ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top