fbpx
ಸಮಾಚಾರ

ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಆ ಹುಡುಗ ಈಗ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್: ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?

ಕಳೆದ ವಾರ ಪ್ರತಿಷ್ಠಿತ ಲಾರ್ಡ್ಸ್​ ಮೈದಾನದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಿ ಐತಿಹಾಸಿಕ ಟೆಸ್ಟ್ ಗೆದ್ದಿರುವ ಟೀಮ್ ಇಂಡಿಯಾ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇತ್ತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಕೆಟಿಗನ ಬಾಲ್ಯದ ಫೋಟೋವೊಂದನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಪುಟ್ಟ ಬಾಲಕನೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಲಕ್ಷಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವುದು ಕಾಣಬಹುದು. ಅಂದು ಲಕ್ಷ್ಮಣ್ ಮುಂದೆ ಆಟೋಗ್ರಾಫ್​ಗೆ ಕಾದಿದ್ದ ಹುಡುಗ ಇಂದು ಅದೇ ಕ್ರಿಕೆಟಿಗನಿಂದ ಭಲೇ ಬೇಷ್ ಎನಿಸಿಕೊಂಡಿರುವುದು ವಿಶೇಷ. ಆ ಹುಡುಗ ಯಾರು ಎಂದರೆ ತಂಡದ ಮ್ಯಾಚ್ ವಿನ್ನರ್ ಬೌಲರ್ ಎನಿಸಿಕೊಂಡಿರುವ ಮೊಹಮದ್ ಸಿರಾಜ್.

 

 

ಮೊಹಮದ್ ಸಿರಾಜ್ ಇತ್ತೀಚಿನ ದಿನಗಳಲ್ಲಿ ಭಾರತ ತಂಡಕ್ಕೆ ಪ್ರಮುಖ ಬೌಲರ್ ಆಗಿ ಪರಿಣಮಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಸಿರಾಜ್‌ ಪ್ರತಿಭಾವಂತ ಬೌಲರ್‌ನಿಂದ ಭಾರತದ ಪ್ರಮುಖ ಆಟಗಾರನಾಗುವತ್ತ ಸಾಗುತ್ತಿದ್ದಾರೆ. ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತದ ಕ್ರಿಕೆಟ್‌ ಇತಿಹಾಸವನ್ನು ಗಮನಿಸಿದರೆ, ಇದು ಸಾಧಾರಣ ಸಾಧನೆಯಲ್ಲ. ಇನ್ನು, ಉತ್ತಮ ಬೌಲಿಂಗ್‌ ಮೂಲಕ ತಮ್ಮ ವಿರುದ್ಧ ಟೀಕೆ ಮಾಡುವ ಜನರ ಬಾಯಿ ಮುಚ್ಚಿಸುತ್ತಿದ್ದಾರೆ ಮೊಹಮ್ಮದ್‌ ಸಿರಾಜ್.

ಸಿರಾಜ್ ಹೊಗಳಿ ಟ್ವೀಟ್ ಮಾಡಿರುವ ಲಕ್ಷ್ಮಣ್ ಅವರು “ನಾನು ಮೊದಲ ಬಾರಿಗೆ ಹೈದರಾಬಾದ್‌ನ ಮಹಾನ್ ಅಬ್ದುಲ್ ಅಜೀಮ್ ಅವರ ನಿವಾಸದಲ್ಲಿ ಈ ಹುಡುಗನನ್ನು ಮೊದಲ ಬಾರಿ ಭೇಟಿಯಾಗಿದ್ದೆ. ಇಂದು ಅದೇ ಹುಡುಗ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವುದು ನೋಡಿ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕಠಿಣ ಪರಿಶ್ರಮ ಮತ್ತು ಗುರಿಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದುವೇ ಸಾಕ್ಷಿ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top