fbpx
ಸಮಾಚಾರ

ಗ್ಯಾಂಗ್​ ರೇ’ಪ್​ ಪ್ರಕರಣ: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ

ಮೈಸೂರು ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ  ನಟಿ ರಮ್ಯಾ ಕೆಂಡಾಮಂಡಲವಾಗಿದ್ದು, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.  ಯುವತಿ ಯಾಕೆ ಹೋಗ್ಬೇಕಿತ್ತು ಎಂದಿದ್ದ  ಗೃಹ ಸಚಿವ ಆರಗ ಜ್ಞಾನೇಂದ್ರ ಮೇಲೆ ಗರಂ ಆಗಿರುವ ರಮ್ಯಾ ಘಟನೆಯನ್ನು ಖಂಡಿಸಿದ್ದು, ನೀವು ಹಾಗೆ ಮಾಡ್ಬಬಾರದಿತ್ತು, ಅಲ್ಲಿಗೆ ಹೋಗಬಾರದಿತ್ತು, ಎಂದು ಮಹಿಳೆಯರ ಮೇಲೆ ಹಕ್ಕು ಚಲಾಯಿಸುವ ಪುರಷರ ವಿರುದ್ಧ ಗುಡುಗಿದ್ದು,  ಇಂಥಾ ನಾನ್​ ಸೆನ್ಸ್​ಗಳನ್ನು ತಡೆಯೋದು.. ನಿಲ್ಸೋದು ಯಾವಾಗ..? ಎಂದು ಪ್ರಶ್ನಿಸಿದ್ದಾರೆ.

 

 

ನಟಿ ರಮ್ಯಾ ಫೇಸ್‌ಬುಕ್ ನಲ್ಲಿ ತಮ್ಮ ಮುಖವನ್ನು ಮರೆ ಮಾಚಿರುವ ಸೆಲ್ಫಿ ಹಂಚಿಕೊಂದ್ದು, ಮಹಿಳೆಯ ಮೇಲೆ ಪುರುಷ ನಡೆಸುವ ಎಲ್ಲ ದೌರ್ಜನ್ಯಗಳಿಗೂ ಮಹಿಳೆಯನ್ನೇ ಹೊಣೆ ಮಾಡಲಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ”ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರವಾಗಲಿ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಆಗಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುತ್ತೇವೆ. ಇದು ನಿನ್ನದೇ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ ಮತ್ತು ತೀರಾ ಚಿಕ್ಕದಾಗಿದೆ, ತೀರಾ ತಡವಾಗಿ ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಕಿಕ್ ಯಾಕೆ ಹಾಕೊಂಡಿದ್ದೆ – ಇದನ್ನೆಲ್ಲ ನಾವು ಆಗಾಗ ಕೇಳುತ್ತಲೇ ಇರುತ್ತೇವೆ! ಯಾಕೆ?”

”ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರೊಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ..! ಇನ್ನಾಗಲ್ಲ..! ಈ ನಾನ್‌ ಸೆನ್ಸ್‌ಗೆ ಈ ಕೂಡಲೆ ಪೂರ್ಣವಿರಾಮ ಇಡಿ! ನಿಜ ಹೇಳಬೇಕು ಅಂದ್ರೆ, ನಾನು ಇದನ್ನು ಮಾಡಿದ್ದೇನೆ. ನನ್ನ ಸ್ನೇಹಿತರೂ ಕೂಡ. ಆಪಾದನೆಯನ್ನು ಹೊತ್ತುಕೊಂಡಿದ್ದೇವೆ. ಆದರೆ ಏನ್ಗೊತ್ತಾ? ಇನ್ಮುಂದೆ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಿರಬೇಡಿ. ಧ್ವನಿಯೆತ್ತಿ…” ಎಂದು ಫೇಸ್‌ಬುಕ್‌ನಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top