fbpx
ಸಮಾಚಾರ

ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

ಭಾರತ ತಂಡದಲ್ಲಿ ಆಡಿದ್ದ ಆಲ್ ರೌಂಡರ್ ಕನ್ನಡಿಗ ಸ್ಟುವರ್ಟ್ ಬಿನ್ನಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ನಿಂದ ದೂರ ಉಳಿಯಲು ನಾನು ನಿರ್ಧರಿಸಿದ್ದೇನೆ ಎಂದು ಸ್ಟುವರ್ಟ್ ಬಿನ್ನಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸ್ಟುವರ್ಟ್‌ ಬಿನ್ನಿ, “ಪ್ರಥಮ ದರ್ಜೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ನಿರ್ಧರಿಸಿರುವ ಬಗ್ಗೆ ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ನನಗೆ ಸಂತೋಷ ಹಾಗೂ ಗೌರವ ತಂದುಕೊಟ್ಟಿದೆ” ಎಂದು ಬಿನ್ನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ತರ ಪಾತ್ರವನ್ನು ನಿರ್ವಹಿಸಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕಳೆದ ಹಲವು ವರ್ಷಗಳಿಂದ ಇವರ ಪ್ರೋತ್ಸಾಹ ಹಾಗೂ ನನ್ನ ಮೇಲೆ ಇಟ್ಟಿದ್ದ ವಿಶ್ವಾಸ ಮೌಲ್ಯಯುತವಾದದ್ದು. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯದ ಬೆಂಬಲ ಇಲ್ಲದೇ ಇದ್ದಿದ್ದರೆ ನನ್ನ ವೃತ್ತಿ ಜೀವನ ಉತ್ತುಂಗಕ್ಕೇರುತ್ತಿರಲಿಲ್ಲ. ಕರ್ನಾಟಕ ತಂಡದ ನಾಯಕನಾಗಿ ಹಲವು ಟ್ರೋಫಿಗಳನ್ನು ಗೆದ್ದಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ,” ಎಂದು ಮಾಜಿ ಆಲ್‌ರೌಂಡರ್‌ ಹೇಳಿದ್ದಾರೆ.

ಬಿನ್ನಿ ಅವರು ಭಾರತ ಪರ ಆರು ಟೆಸ್ಟ್ ಪಂದ್ಯ, 14 ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಿದ್ದಾರೆ. 37 ವರ್ಷದ ಬಿನ್ನಿ ಬಿಸಿಸಿಐಗೆ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಹಕರಿಸಿದ ಕರ್ನಾಟಕ ಕ್ರಿಕೆಟ್​ಗೆ ಧನ್ಯವಾದ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಮತ್ತು 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ರೋಗರ್ ಬಿನ್ನಿ ಅವರ ಮಗ ಸ್ಟುವರ್ಟ್ ಬಿನ್ನಿ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top