fbpx
ಸಮಾಚಾರ

ಖ್ಯಾತ ನಟ ಅಡಿವಿ ಶೇಷ್ ಆಸ್ಪತ್ರೆಗೆ ದಾಖಲು

ಟಾಲಿವುಡ್‌ ನಟ ಅಡಿವಿ ಶೇಷ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕಳೆದೊಂದು ವಾರದಿಂದ ಡೆಂಗಿ ಜ್ವರದಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ರಕ್ತದ ಪ್ಲೇಟ್‌ಲೆಟ್‌ಗಳ ಹಠಾತ್ ಕುಸಿತದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಇತ್ತೀಚೆಗೆ ಅಡಿವಿಗೆ ಜ್ವರ ಕಾಣಿಸಿಕೊಂಡಿತ್ತು. ಕೆಲವು ದಿನ ಅವರು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದಿದ್ದರು. ನಂತರ ರಕ್ತದ ಪರೀಕ್ಷೆ ಮಾಡಿದಾಗ ಅವರಿಗೆ ಡೆಂಗ್ಯೂ ಇರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ, ಸೆಪ್ಟೆಂಬರ್​ 18ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಈಗ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಅಡಿವಿ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಇದಕ್ಕಿದ್ದಂತೆ ಕುಸಿತ ಕಂಡಿದೆ. ಅವರನ್ನು ಪ್ರತಿಷ್ಠಿತ ಖ್ಯಾತ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದ ’ಮೇಜರ್‌’ ಸಿನಿಮಾದಲ್ಲಿ ಅಡಿವಿ ಶೇಷ್‌ ನಾಯಕ ನಟರಾಗಿ ನಟಿಸಿದ್ದಾರೆ. 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ ಸಿನಿಮಾವಾಗಿದೆ. ಶಶಿ ಕಿರಣ್ ಟಿಕ್ಕ ನಿರ್ದೇಶನದ ’ಮೇಜರ್’ ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಇನ್ನು ಘೋಷಣೆ ಮಾಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top