fbpx
ಸಮಾಚಾರ

ದಿನನಿತ್ಯ ನಾವು, ನೀವು ಬಳಸುವ ಹ್ಯಾಷ್ ಟ್ಯಾಗ್ ಹಿಂದೆ ರೋಚಕ ಕಥೆ ಇದೆ

ಹ್ಯಾಷ್ ಟ್ಯಾಗ್ ಲೋಕದಲ್ಲೊಮ್ಮೆ ಸುತ್ತಿ ಬರೋಣ. ಅದಕ್ಕೂ ಮೊದಲು #I_standwithIndia #I_standwithkarnataka ಅನ್ನೋ ಬಲವಾದ ಆಶಾಕಿರಣ ನಮ್ಮೊಳಗೆ ಮೂಡಬೇಕಿದೆ
#Istandwith_formerprotest, #standwithgovt, #influencer, #influencermarketing, #fridayfeeling, #MondayMotivation. #tbt. #wcw.
ಈ ತರಹದ ಅನೇಕ ಹ್ಯಾಷ್ ಟ್ಯಾಗ್ ಗಳು ಇತ್ತೀಚೆಗೆ ಬಹುತೇಕ ಎಲ್ಲಾ ಸೋಷಿಯಲ್ ಮೀಡಿಯಾದ ಗುಂಪುಗಳಲ್ಲೂ ಹರದಾಡುತ್ತಿದ್ದುದನ್ನು ನೀವು ಗಮನಿಸಿರಬಹುದು. ಅಷ್ಟಕ್ಕೂ ಈ ಹ್ಯಾಷ್ ಟ್ಯಾಗ್ ಹಾಕುವುದಾದರೂ ಯಾಕೆ? ಹ್ಯಾಷ್ ಟ್ಯಾಗ್ ಹಾಕುವುದರಿಂದ ಲಾಭವಾದರೂ ಏನಿದೆ? ಈ ತರಹದ ವಿಚಾರಗಳು ಹೊಸದಾಗಿ ಈ ಇಂಟರ್ನೆಟ್ ಪ್ರಪಂಚಕ್ಕೆ ಕಾಲಿಟ್ಟಾಗ ನಮ್ಮೆಲ್ಲರನ್ನೂ ಕಾಡಿರುತ್ತದೆ.

ಇವತ್ತಿಗೆ ಹ್ಯಾಷ್ ಟ್ಯಾಗ್ ಬಹಳ ಫೇಮಸ್ ಇರುವ ವಿಚಾರ. ಸಾಮಾಜಿಕ ಜಾಲತಾಣದಲ್ಲಿ ನಾಯಿಮರಿಯ ಫೋಟೋ ಹಾಕುವವನಿಂದ ಹಿಡಿದು ದೊಡ್ಡ ದೊಡ್ಡ ವಹಿವಾಟಿನವರೆಗೆ ಎಲ್ಲರೂ ಹ್ಯಾಷ್ ಟ್ಯಾಗ್ ಬಳಸಿಯೇ ಇರುತ್ತಾರೆ. ಆದರೆ ಅದು ಬಳಕೆಗೆ ಬರುವ ಹಿಂದೆ ಒಬ್ಬ ವ್ಯಕ್ತಿಯ ಪ್ರಯಾಸದ ಪಯಣವಿದೆ. ಅವಮಾನಗಳ ಕಥೆಯಿದೆ. ಹ್ಯಾಷ್ ಟ್ಯಾಗ್ ಉಪಯೋಗವನ್ನು ಜಗತ್ತಿನ ಜನರಿಗೆ ಅರ್ಥ ಮಾಡಿಸುವ ಆ ಸಂಶೋಧಕ ಅಸಲಿ ಕಥೆ ಹೀಗಿದೆ ನೋಡಿ.

ಅದು ೨೦೦೭ನೇ ಕಾಲಘಟ್ಟ. ಆಗೆಲ್ಲಾ ಇವಾಗಿನ ಹಾಗೆ ನೂರೆಂಟು ಸೋಷಿಯಲ್ ಮೀಡಿಯಾಗಳಿರಲಿಲ್ಲ. ಇದ್ದಿದ್ದು ಬೆರಳೆಣಿಯಷ್ಟು. ಅದರಲ್ಲೂ ಒಂದು ರೇಂಜಿಗೆ ಸಂವಹನ ಮಾಡುತ್ತಿದ್ದುದು ಟ್ವಿಟರ್ ಮಾತ್ರ. ಆದರೆ ಅದರಲ್ಲಿ ಸಂಘಟನಾತ್ಮಕವಾಗಿ ಅಥವಾ ಒಂದು ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಲು ಸಾಧ್ಯವಿರಲಿಲ್ಲ.

ಇದರ ಅಗತ್ಯತೆಯನ್ನು ಗುರುತಿಸಿದವರು ಸ್ಯಾನ್ ಫ್ರಾನ್ಸಿಸ್ಕೋದ ಕ್ರಿಸ್ ಮೆಸ್ಸಿನಾ ಎಂಬ ವ್ಯಕ್ತಿ. ಅರ್ಥಾತ್ ನಾವಿಂದು ಬಳಸುವ ಹ್ಯಾಷ್ ಟ್ಯಾಗ್ ಪಿತಾಮಹ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ‘ಉತ್ಪನ್ನ ವಿನ್ಯಾಸಕರಾಗಿದ್ದ ಇವರು ಸಿಲಿಕಾನ್ ವಲಯದಲ್ಲಿ ಅಂದರೆ ಕಾರ್ಪೋರೆಟ್ ವಲಯದಲ್ಲಿ ಒಂದು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದರು. ಇಂಟರ್ನೆಟ್ ಚಾಟ್ ರೂಮ್ ಗಳಿಂದ ಹ್ಯಾಂಡ್ ಟ್ಯಾಗ್ ಬಳಸುವ ಆಲೋಚನೆಯಿಂದಾಗಿಯೇ ಅವರ ಮುಂದೆ ಪೌಂಡ್ ಅನ್ನುವ ಚಿಹ್ನೆ ಕರಾರುವಕ್ಕಾಗಿ ಚಿತ್ರಿತವಾಗಿದ್ದು.

ಅವರ ಈ ಆಲೋಚನೆಯನ್ನು ಟ್ವಿಟರ್ ಗೆ ನೀಡಲು ನಿರ್ಧರಿಸಿದಾಗ ಕಂಪನಿ ಅವರನ್ನು ಟೀಕಿಸಿದ್ದೂ ಇದೆ. ಇಂತಹ ದಡ್ಡತನವನ್ನು ಮತ್ತೆ ಪ್ರದರ್ಶಿಸಬೇಡ ಮತ್ತು ಅದು ಎಂದಿಗೂ ನಮ್ಮ ಸಂಸ್ಥೆಗೆ ಹೊಂದಿಕೆಯಾಗಲಾರದೆAದ ಮುಖಕ್ಕೆ ರಾಚಿದಂತೆ ಹೇಳಿದಾಗ ಮೆಸ್ಸಿನಾ ಖಿನ್ನತೆಗೆ ಒಳಗಾಗಿದ್ದರಂತೆ. ಆದರೆ ಅವರ ಮುಖದ ಮೇಲಿದ್ದ ನಗು ಮಾಸಲಿಲ್ಲ. ತನ್ನ ಸಂಶೋಧನೆಯ ಬಗೆಗಿದ್ದ ಅಪಾರ ನಂಬಿಕೆಯನ್ನು ದೂರತಳ್ಳಲಿಲ್ಲ.

೨೦೦೭ಅಕ್ಟೋಬರ್ ತಿಂಗಳ ಚಳಿಗಾಲ. ಫ್ರಾನ್ಸಿಸ್ಕೋದ ಸ್ಯಾನ್ ಡಿಯಾಗೋದಲ್ಲಿ ಸೊಂಪಾಗಿ ಬೆಳೆದಿದ್ದ ಕಾಡು ಅಗ್ನಿಗೆ ಆಹುತಿಯಾಗಿತ್ತು. ಎಲ್ಲೆಡೆಯಿಂದ ಟ್ವಿಟರ್ ತುಂಬಾ ಟ್ವೀಟ್ ಗಳು ಶುರುವಾದವು. ಇದೇ ಸಮಯಕ್ಕೆ ಮೆಸ್ಸಿನಾ ಟ್ವೀಟ್ ಮಾಡುತ್ತಿದ್ದ ತನ್ನ ಸ್ನೇಹಿತರಿಗೆ
#ssandiregofire
#ಸ್ಯಾಂಡಿಗೋಫೈರ್ ಎಂದು ಸೇರಿಸಲು ಬೇಡಿಕೊಂಡರು. ಇದೇ ಟ್ಯಾಗ್ ಅನ್ನು ಹೆಚ್ಚು ಜನ ಅನುಕರಿಸಲು ಸಾಕಷ್ಟು ಸಮಯ ಬೇಕಾಗಿರಲಿಲ್ಲ. ಇಡೀ ಸ್ಯಾನ್ ಡಿಯಾಗೋದಲ್ಲಿ ಈ ಟ್ಯಾಗ್ ಸದ್ದಣಿಸಿತು. ಹೊಸ ಬಗೆಯ ಹೋರಾಟಕ್ಕೆ ಇದು ಮುನ್ನುಡಿ ಬರೆಯಿತು.

ಒಂದೇ ರೀತಿಯ ಭಾವನೆಯನ್ನು ಹೆಚ್ಚು ಜನರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂಬ ಅಂಶವನ್ನು #ಸ್ಯಾಂಡಿಗೋಫೈರ್ ಪ್ರೂವ್ ಮಾಡಿತ್ತು. ಜಾಗತಿಕವಾಗಿ ಜನ ಸಂಭಾಷಣೆಯಲ್ಲಿ ಭಾಗವಹಿಸಲು ಇಚ್ಚಿಸುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದ್ದು ಇಲ್ಲಿಂದಲೇ.

ಯಾವ ಟ್ವಿಟರ್ ಇದನ್ನು ಹುಚ್ಚು ಆಲೋಚನೆ ಅಂದಿತ್ತೋ ಅದೇ ಟ್ವಿಟರ್ ೨೦೦೯ರಲ್ಲಿ ತನ್ನ ಬಳಕೆದಾರರಿಗೆ ಹ್ಯಾಷ್ ಟ್ಯಾಗ್ ಹುಡುಕುವ ಆಯ್ಕೆಯನ್ನು ಸೇರಿಸಿತು. ೨೦೧೦ರಲ್ಲಿ ಇನ್ಸ್ಟಾ_ಗ್ರಾಮ್ ಬಳಕೆಗೆ ಬಂದ ಬಳಿಕ ಇದನ್ನು ತನ್ನ ಟ್ರೆಂಡ್ ಮಾರ್ಕ್ ಆಗಿ ಅದು ಬಳಸಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಹಾ ನೆನಪಿರಲಿ ಇವತ್ತಿನ ಹೋರಾಟದ ಪ್ರಮಖ ಮಾಧ್ಯಮಗಳಲ್ಲಿ ಒಂದಾದ ಫೇಸ್ಬುಕ್ ಹ್ಯಾಷ್ ಟ್ಯಾಗ್ ಅಳವಡಿಸಿಕೊಂಡಿದ್ದು ೨೦೧೩ರಲ್ಲಿ!!!

ಇವತ್ತಿಗೆ ಜಗತ್ತಿನಲ್ಲಿ ಸಂಚಲನ ಮೂಡಿಸಿದ ಕೆಲವು ಹ್ಯಾಷ್ ಟ್ಯಾಗ್ ಗಳ ಪೈಕಿ #Neveragain #MeToo #BlackliveMatter ನಂಬಲಾಗದ ಯಶಸ್ವಿಯನ್ನು ತಂದುಕೊಟ್ಟಿದೆ. ೨೦೧೬ರಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ #imwithher, #MakeAmericanGreatAgain #Lockherhup #feelthebern ಇತ್ಯಾದಿ ಟ್ಯಾಗ್ ಗಳ ಹರಿದಾಟವನ್ನು ನಾವು ಗಮನಿಸಿರಬಹುದು. ಇದು ಚುಣಾವಣೆಯ ಮೇಲೆ ಬೀರಿದ ಪರಿಣಾಮವನ್ನು ನಾವು ನೆನಪಿಸಿಕೊಳ್ಳಲೇಬೇಕು.

ನಿರ್ದಿಷ್ಟ ವಿಷಯದ ಹುಡುಕಾಟದಲ್ಲಿರುವವರಿಗೆ, ಹೋರಾಟಗಾರರಿಗೆ, ವಿಷಯಗಳನ್ನು ತ್ವರಿತವಾಗಿ ಮುಟ್ಟಿಸಲು ಸಹಾಯ ಮಾಡುವವರಿಗೆ ಇದು ಸಹಕಾರಿಯಾಯ್ತು ಮತ್ತು ಯಶಸ್ವಿಯಾಯ್ತು ಕೂಡ. ಇದಕ್ಕೆಲ್ಲಾ ಕಾರಣವಾದ, ಅವಮಾನದಿಂದ ಬೆಂದರೂ ತಲೆಕೆಡಿಸಿಕೊಳ್ಳದೆ ಹಠ ಸಾಧನೆಯಿಂದ ಇಂದಿಗೂ ಸೋಷಿಯಲ್ ಮೀಡಿಯಾವೆಂಬ ಆಧುನಿಕ ಲೋಕದಲ್ಲಿ ಹ್ಯಾಷ್ ಟ್ಯಾಗ್ ಪ್ರಪಂಚದ ಪಿತಾಮಹನಾಗಿ ಮೆರೆಯುತ್ತಿರುವ ಕ್ರಿಸ್ ಮೆಸ್ಸಿನಾಗೆ ಸಲಾಂ ಹೇಳಲೇ ಬೇಕು.

#ನಾವೂ ನೀವೂ ಹ್ಯಾಷ್ ಟ್ಯಾಗ್ ಬಳಸೋದು ಹೇಗೆ?
ಹ್ಯಾಷ್ ಟ್ಯಾಗ್ ಬಳಸುವಾಗ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ.
೧. ನೀವು ಆಯ್ಕೆ ಮಾಡಿದ ಕೀವರ್ಡ್ಗಳ ಮೊದಲು ಯಾವಾಗಲೂ # ಅನ್ನು ಬಳಸಿ.
೨. ಹ್ಯಾಶ್ಟ್ಯಾಗ್ಗಳಲ್ಲಿ ವಿರಾಮಚಿಹ್ನೆ ಅಥವಾ ಸ್ಥಳಗಳನ್ನು ಬಳಸಬೇಡಿ.
೩. ಹ್ಯಾಶ್ಟ್ಯಾಗ್ನಲ್ಲಿ ಹಲವಾರು ಕೀವರ್ಡ್ಗಳಿದ್ದರೆ ಸರಳೀಕರಿಸಿ.
೪. # ಗೆ ಮೊದಲು ಅಕ್ಷರಗಳನ್ನು ಟೈಪಿಸಬೇಡಿ…
೫. ಅಕ್ಷರಗಳು ಮತ್ತು ಸಂಖ್ಯೆಗಳನ್ನು ಬಳಸಿ, ಎಂದಿಗೂ ಸಂಖ್ಯೆಗಳನ್ನು ಮಾತ್ರ ಬಳಸಬೇಡಿ.
_ಸ್ವಸ್ತಿಕ್ ಕನ್ಯಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top