fbpx
ಇತರೆ

ಅಂಕಿಗಳಿಗೂ ಮೀರಿ ಅಗಣಿತವಾದ ಶ್ರೀನಿವಾಸ

ಸೊನ್ನೆಯನ್ನು ಕಂಡು ಹಿಡಿದಿದ್ದು ಅಥವಾ ಜಗತ್ತಿಗೆ ಬಳುವಳಿಯಾಗಿ ಕೊಟ್ಟಿದ್ದು ಭಾರತೀಯರೆಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಅದೇ ಝೀರೋನಿಂದ ಹೀರೋಗಳಾದ ಅನೇಕ ಭಾರತೀಯರೂ ನಮಗೆ ಸಿಗುತ್ತಾರೆ. ನಾನಿಂದು ನಿಮಗೆ ಪರಿಚಯಿಸಲು ಹೊರಟಿರುವ ದಿಗ್ಗಜನ ಬದುಕೂ ಶುರುವಾಗಿದ್ದು ಇದೇ ಸೊನ್ನೆಯಿಂದ. ಸೊನ್ನೆಯೆಂದರೆ ಬರೀ ‘0’ ಅಷ್ಟೆ.
“ಇಲ್ಲದೇ ಇರುವ ಹಣ್ಣುಗಳನ್ನು ಇಲ್ಲದೇ ಇರುವ ಜನರಿಗೆ ಹಂಚಿದರೆ ಒಬ್ಬೊಬ್ಬರಿಗೆ ಎಷ್ಟೆಷ್ಟು ಹಣ್ಣು ಬಂತು? ಒಂದರಿಂದ ಒಂದನ್ನು ಭಾಗಿಸಿದರೆ ಒಂದು ಉತ್ತರ ಬರುವುದಾದರೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಎಷ್ಟು ಉತ್ತರ ಬರುತ್ತದೆ ಸರ್?” ಅಂತ ಸಣ್ಣ ಹುಡುಗನೊಬ್ಬ ಧೈರ್ಯದಿಂದ ಗಣಿತ ಪಾಠ ಹೇಳುತ್ತಿದ್ದ ಅಧ್ಯಾಪಕರಿಗೇ ಪ್ರಶ್ನೆ ಇಟ್ಟ. ಬಡಕುಟುಂಬದಿಂದ ಬಂದ ಬ್ರಾಹ್ಮಣ ಹುಡುಗ. ಅವರಾದರೂ ಏನು ಹೇಳಿಯಾರು. ನೀನೇ ದೊಡ್ಡವನಾದ ಮೇಲೆ ಹುಡುಕು ಅಂತ ಬೆನ್ನು ತಟ್ಟಿರಬಹುದು. ಅದೇ ಪ್ರಶಂಸೆ ಆ ವಿದ್ಯಾರ್ಥಿಯ ಜೀವನವನ್ನೇ ಬದಲಾಯಿಸಿತು. ಆತ ಗಣಿತವನ್ನು ಅದೆಷ್ಟು ಚೆನ್ನಾಗಿ ಹಚ್ಚಿಕೊಂಡನೆಂದರೆ ನಮಗೆಲ್ಲಾ ಕಬ್ಬಿಣದ ಕಡಲೆ ಎನಿಸುವ ಗಣಿತ ಇವನಿಗೆ ಸಿಪ್ಪೆ ಸುಲಿಸ ಬಾಳೆ ಹಣ್ಣಿನಂತಾಗಿತ್ತು. ಅದಕ್ಕೇ ಇರಬೇಕು ಗಣಿತ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ಇವ ಫೇಲಾಗುತ್ತಿದ್ದ.
ಎಲ್ಲಿಯವರೆಗೆ ಎಂದರೆ ಆತನಿಗೆ ಪದವಿ ಒಲಿಯಲೇ ಇಲ್ಲ. ಆದರೆ ಬದುಕಿನಲ್ಲಿ ಆತ ಇದಕ್ಕಿಂತ ಸಾವಿರಪಾಲ ಗಡಿ ದಾಟಿದ್ದ. ಅದಕ್ಕೇ ಈತ ಭಾರತದ ರಾಷ್ಟ್ರೀಯ ಗಣಿತ ದಿನದ ರೂವಾರಿಯಾಗಿ ಮೆರೆದಿದ್ದು. ಅದೆಷ್ಟೋ ವಿಶ್ವವಿದ್ಯಾಲಯ, ವಿದ್ಯಾ ಸಂಸ್ಥೆಗಳ ಸಿಲೆಬಸ್ ನ ಪ್ರಮೇಯವಾಗಿ ಕುಳಿತಿದ್ದು. ಈ ಮೇಧಾವಿ ಮತ್ಯಾರೂ ಅಲ್ಲ. ನಮ್ಮ ಹೆಮ್ಮೆಯ ಭಾರತ ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್.
ರಾಮಾನುಜನ್ ಅವರೊಳಗಿದ್ದ ಗಣಿತಜ್ಞನನ್ನು ಹುಡುಕಿ ಹೊರತೆಗೆದಿದ್ದು ಮತ್ತೋರ್ವ ಶ್ರೇಷ್ಠ ಬ್ರಿಟಿಷ್ ಗಣಿತಜ್ಞ ಡಿ.ಹೆಚ್ ಹಾರ್ಡಿ. ಒಂದು ಸಲ ರಾಮಾನುಜನ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಹಾರ್ಡಿ ಆರೋಗ್ಯ ವಿಚಾರಿಸಲು ಟ್ಯಾಕ್ಸಿಯಲ್ಲಿ ಬಂದಿದ್ದರಂತೆ. ಅವರ ಟ್ಯಾಕ್ಸಿ ನಂಬರ್ 1729. ಹೀಗೆ ಉಭಯ ಕುಶಲೋಪರಿ ಮಾತನಾಡುವಾಗ ಹಾರ್ಡಿ ತನ್ನ ಟ್ಯಾಕ್ಸಿ ನಂಬರ್ ಬಹಳ ಬೋರ್ ಆಗಿರುವ ಸ್ವಾರಸ್ಯಕರವಾಗಿರದ ನಂಬರ್ ಎಂದು ಅಸಡ್ಡೆಯಿಂದ ಮಾತನಾಡಿದರಂತೆ. ಅನಾರೋಗ್ಯದ ನಡುವೆಯೂ ರಾಮಾನುಜನ್ ಇದೊಂದು ಸ್ವಾರಸ್ಯಕರ ಸಂಖ್ಯೆಯಾಗಿದ್ದು ಎರಡು ಸಂಖ್ಯೆಗಳ ಕ್ಯೂಬ್ ಗಳನ್ನು ಸೇರಿಸುವಾಗ ಸಿಗುವ ಎರಡನೇ ಅತೀ ಚಿಕ್ಕ ಸಂಖ್ಯೆ. ಎರಡೂ ರೀತಿಯಲ್ಲಿಯೂ ಈ ಸಂಖ್ಯೆಗಳನ್ನು ಕ್ಯೂಬ್ ಗಳ ಮೊತ್ತವಾಗಿ ಕಾಣಬಹುದು ಎಂದು ಕ್ಷಣಾರ್ಧದಲ್ಲಿ ವಿವರಿಸಿದರು… 1×1×1+12×12×12=1729
9×9×9+10×10×10=1729 ಎಂದು ವಿವರಿಸುವಾಗ ಯಾರಾದರೂ ಅಚ್ಚರಿ ಪಡಲೇಬೇಕು. ಅಷ್ಟು ಚುರುಕಾಗಿದ್ದರು ರಾಮಾನುಜನ್! ಅಂದಿನಿಂದ 1729 ಹಾರ್ಡಿ-ರಾಮಾನುಜನ್ ನಂಬರ್ ಎಂದು ಪ್ರಖ್ಯಾತಿ ಪಡೆಯಿತು.
ಕೇವಲ ಹನ್ನೆರಡು ವರ್ಷ ವಯಸ್ಸಿಗೇ ಟ್ರಿಗ್ನೋಮೆಟ್ರಿಯನ್ನು ಕರಗತ ಮಾಡಿಕೊಂಡಿದ್ದ ಪುಟ್ಟ ಹುಡುಗ ಮುಂದೆ ತನ್ನದೇ ಆದ ಪ್ರಮೇಯಗಳನ್ನು ರೂಪಿಸಿ ಗಣಿತಲೋಕದ ಸಾರ್ವಭೌಮನಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ಯಾಕೆಂದರೆ ಅವರ ಮನೆಯಲ್ಲಿದ್ದ ಬಡತನವೂ ಹಾಗಿತ್ತು. ರಾಮಾನುಜನ್ ಓದಿದ್ದು ತನ್ನ ಸ್ನೇಹಿತರಿಂದ ಪುಸ್ತಕಗಳನ್ನು ಎರವಲು ಪಡೆದು. ಜೀವನೋಪಾಯಕ್ಕಾಗಿ ಮಾಡಿದ್ದು ಕ್ಲರ್ಕ್ ಕೆಲಸ. ಕೊಟ್ಟಿದ್ದು ಮಾತ್ರ ಬಿಡಿಸಲಾಗದ ಸಮಸ್ಯೆಗಳ ಉತ್ತರ ಬಿಡಿಸುವ ಕೀಲಿಕೈ. ಎಂತವರಾದರೂ ಭೇಷ್ ಅನ್ನಲೇಬೇಕಾದ ಸಾಧನೆ ಅದು.
ರಾಮಾನುಜನ್ ಮೊಣಕೈ ಅವರ ಪರಿಶ್ರಮದ ಕಥೆ ಸಾರುತ್ತಿತ್ತು. ಸದಾ ಕರಿಹಲಗೆಯ ಮೇಲಿಟ್ಟು ಕರ್ರಗಾಗಿತ್ತು ಮತ್ತು ಬರೆದಿದ್ದನ್ನು ಒರೆಸಿ ಒರೆಸಿ ದೊರಗಾಗಿತ್ತು. ಯಾರೋ ಸ್ನೇಹಿತರು ಕೇಳಿದ್ದಕ್ಕೆ ಬರೆದಿದ್ದನ್ನು ಒರೆಸಲು ಚಿಂದಿ ಹುಡುಕುವಷ್ಟು ತಾಳ್ಮೆ ಪುರಸೊತ್ತು ಇಲ್ಲ, ಹಾಗಾಗಿ ಮೊಣಕೈಯ್ಯಲ್ಲೇ ಒರೆಸುತ್ತೇನೆ ಎಂದಿದ್ದರಂತೆ. ರಾಮಾನುಜನ್ ಪರಿಶ್ರಮ, ಜ್ಞಾನ ಬಡತನ ಈ ಮೂರೂ ಮೇಲಿನ ಒಂದೇ ಘಟನೆಯಲ್ಲಿ ಚಿತ್ರಿತವಾಗಿದೆ.
ರಾಮಾನುಜನ್ ತಾನು ಸಂಶೋಧನೆ ಮಾಡುತ್ತಿದ್ದುದೆಲ್ಲವನ್ನೂ ಬರೆದಿಡುತ್ತಿದ್ದರಂತೆ. ಹಾಗೆ ಅವರು ಬಾಲ್ಯದಿಂದಲೂ ಬರೆದಿದ್ದು ಒಟ್ಟು ಮೂರು ಪುಸ್ತಕಗಳು. ಕೊನೆಯ ನೋಟ್ ಬುಕ್ ಅವರ ಕೊನೆಗಾಲದಲ್ಲಿ ಎಲ್ಲೋ ಕಳೆದು ಹೋಗಿ ರಾಮಾನುಜನ್ ಇಹಲೋಕ ತ್ಯಜಿಸಿ ಐವತ್ತು ವರ್ಷಗಳ ಬಳಿಕ ಮರಳಿ ಸಿಕ್ಕಿತ್ತು. ನಕ್ಷತ್ರಗಳ ಜೀವಿತಾವಧಿ, ಕಪ್ಪುಗುಳಿ ಇತ್ಯಾದಿಗಳ ಮಾಹಿತಿ ಇದ್ದ ಪುಸ್ತಕ ಅದಾಗಿತ್ತು. ಜೊತೆಗೆ ಅನೇಕ ವಿಚಾರಗಳು ಅರ್ಥೈಸಿಕೊಳ್ಳಲಾಗದ ಕಗ್ಗಂಟಾಗಿಯೇ ಉಳಿಯುವಂತವಾಗಿತ್ತು.
ಇಷ್ಟೆಲ್ಲಾ ಸಾಧನೆ ಮಾಡಿದ್ದ ರಾಮಾನುಜನ್ ಬದುಕಿದ್ದು ಕೇವಲ 32ವರ್ಷ ಮಾತ್ರ. ಬಿಡಿಸಿದ ಒಟ್ಟು ಸಮಸ್ಯೆಗಳು 3900! ಬಾಹ್ಯಾಕಾಶ ವಿಜ್ಞಾನ, ಖಗೋಳಶಾಸ್ತ್ರ, ತಂತ್ರಜ್ಞಾನ ಕ್ಷೇತ್ರಗಳಿಗೆ ಮುನ್ನುಡಿಯಂತಿರುವ ಗಣಿತದ ಕುರಿತಾಗಿ ಅನೇಕ ಸಂಶೋಧಕರಿಗೆ ಅಡಿಗಲ್ಲು ಹಾಕಿದವರೇ ರಾಮಾನುಜನ್ ಎಂದರೆ ತಪ್ಪಾಗಲಾರದು. ಅಂತಹ ಮಹಾನ್ ಚೇತನಕ್ಕೆ ನಮ್ಮದೊಂದು ಅಕ್ಷರ ನಮನ.
ಆಕರ :
The Man Who Knew Infinity: A Life of the Genius Ramanujan by Robert Kanige

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top