fbpx
ಸಮಾಚಾರ

ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನದ ಭಾಗವತ, ಗಾನ ಗಂಧರ್ವರೆಂದೇ ಖ್ಯಾತರಾಗಿದ್ದ ಪದ್ಯಾಣ ಗಣಪತಿ ಭಟ್ (66) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಕೆಲವು ತಿಂಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಬಳಿಕ ಅದು ನ್ಯೂಮೋನಿಯಾಕ್ಕೆ ತಿರುಗಿತ್ತು. ಈ ಮಧ್ಯೆ, ಹೃದಯ ಸಂಬಂಧಿ ಕಾಯಿಲೆಯೂ ಅವರನ್ನು ಕಾಡಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಇಂದು ಬೆಳಿಗ್ಗೆ 7.30ಕ್ಕೆ ಹೃದಯಾಘಾತಕ್ಕೊಳಗಾಗಿ ನಿಧನರಾದರು.

 

 

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಗೋಳ್ತಾಜೆಯಲ್ಲಿ ಜನಿಸಿದ ಅವರು ಮೂಲತಃ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟಂಬದವರು. ಯಕ್ಷಗಾನ ರಂಗಕ್ಕೆ ಪದ್ಯಾಣ ಮನೆತನದ ಕೊಡುಗೆ ಅಪಾರ. ಈ ಮನೆತನದ ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಗಣಪತಿ ಭಟ್ ಜನಿಸಿದ್ದರು.

ಮೃತರ ಆತ್ಮಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದು “ಯಕ್ಷಗಾನ ಕಲಾ ಕ್ಷೇತ್ರದಲ್ಲಿ ತಮ್ಮ ಕಂಚಿನ ಕಂಠದಿಂದ ಜನಮೆಚ್ಚಿದ ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ ರವರ ಅಗಲಿಕೆಯಿಂದ ಸಾಂಸ್ಕೃತಿಕ ರಂಗಕ್ಕೆ ಭರಿಸಲಾರದ ನಷ್ಟವಾಗಿದೆ. ನಾಲ್ಕು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀ ಪದ್ಯಾಣ ಗಣಪತಿ ಭಟ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top