fbpx
ಸಮಾಚಾರ

“ಪುನೀತ್ ಸಿನಿಮಾ ಮೂಲಕವೇ ಕಮ್ ಬ್ಯಾಕ್ ಮಾಡಬೇಕು ಅಂದುಕೊಂಡಿದ್ದೆ” ಅಪ್ಪು ನಿಧನಕ್ಕೆ ರಮ್ಯಾ ಕಂಬನಿ

ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರು ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ, ಪುನೀತ್‌ ಅವರ ಜತೆ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್‌ ಸಾವಿನ ಕುರಿತಂತೆ ವಿಜಯ ಕರ್ನಾಟಕದ ಜತೆ ಮಾತನಾಡಿರುವ ರಮ್ಯಾ, ‘ನನಗೆ ಈ ವಿಷಯವನ್ನು ನಂಬಲು ಆಗುತ್ತಿಲ್ಲ’ ಎಂದಿದ್ದಾರೆ.

‘ಕೆಲ ದಿನಗಳ ಹಿಂದೆಯಷ್ಟೇ ನಾನು ಅವರ ಜತೆ ಫೋನ್‌ನಲ್ಲಿ ಮಾತನಾಡಿದ್ದೆ. ಅಪ್ಪು ನನಗೆ ನಟ ಎನ್ನುವುದಕ್ಕಿಂತ ಆತ್ಮೀಯ ಸ್ನೇಹಿತ. ಒಂದು ವೇಳೆ ನಾನು ನಟನೆಗೆ ಕಮ್‌ಬ್ಯಾಕ್‌ ಮಾಡುವುದಾದರೆ ಅದು ಅಪ್ಪು ಅವರ ಸಿನಿಮಾ ಮೂಲಕ ಮಾತ್ರ ಮಾಡಬೇಕು ಎಂದು ಅಂದುಕೊಂಡಿದ್ದೆ. ಪವನ್‌ಕುಮಾರ್‌ ಅವರ ‘ದ್ವಿತ್ವ’ ಸಿನಿಮಾಗೆ ನನಗೆ ಆಫರ್‌ ಬಂದಿತ್ತು. ಆದರೆ ನನಗೆ ಅಪ್ಪು ಅವರ ಜತೆ ಮತ್ತೆ ನಟನೆ ಮಾಡಿದರೆ, ಬೇರೆ ರೀತಿಯ ಸ್ಕ್ರಿಪ್ಟ್‌ ಮೂಲಕ ಮಾಡಬೇಕು ಎಂಬ ಆಸೆಯಿತ್ತು. ಹಾಗಾಗಿ ಇದರಲ್ಲಿ ನಾನು ನಟಿಸುವುದಿಲ್ಲ. ಬೇರೆ ಸಿನಿಮಾದಲ್ಲಿ ಕೆಲಸ ಮಾಡೋಣ ಎಂದೆ. ಅದಾದ ಮೇಲೆ ಅಪ್ಪು ನನ್ನನ್ನು ಕಾಲೆಳೆದು, ರೇಗಿಸಿ ಫೋನ್‌ ಇಟ್ಟಿದ್ದರು’ ಎಂದರು.

ನಾನು ಪುನೀತ್‌ ಅವರು ‘ಅಪ್ಪು’ ಸಿನಿಮಾಗಾಗಿ ಫೋಟೊಶೂಟ್‌ ಮಾಡಿಸಿದ್ದೆವು. ಆದರೆ ನನಗೆ ಆ ಸಿನಿಮಾದಲ್ಲಿ ನಟಿಸಲಾಗಲಿಲ್ಲ. ನಂತರದಲ್ಲಿ ನಾನು ಪುನೀತ್‌ ಜೊತೆ ‘ಅಭಿ’ ಸಿನಿಮಾ ಮಾಡಿದೆ. ನಂತರದಲ್ಲಿ ಸಾಲುಸಾಲಾಗಿ ಮೂರ್ನಾಲ್ಕು ಸಿನಿಮಾಗಳನ್ನು ಪುನೀತ್‌ ಅವರ ಜೊತೆ ಮಾಡಿದೆ. ಸೆಟ್‌ನಲ್ಲಿ ಯಾವುತ್ತೂ ಅಪ್ಪು ನಾನು ರಾಜ್‌ಕುಮಾರ್‌ ಅವರ ಮಗ ಎಂಬ ಹಮ್ಮು ತೆಗೆದುಕೊಂಡು ಬಂದಿರಲಿಲ್ಲ. ಅವರು ಬಹಳ ಸರಳವಾಗಿದ್ದರು. ದೊಡ್ಡವರಾಗಲಿ ಅಥವಾ ಸಣ್ಣವರೇ ಇರಲಿ ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಿದ್ದರು’ ಎಂದಿದ್ದಾರೆ ರಮ್ಯಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top