fbpx
ಸಮಾಚಾರ

ಹಿರಿಯ ನಟಿ ಲಲಿತಾ ಆಸ್ಪತ್ರೆಗೆ ದಾಖಲು

ಮಲೆಯಾಳಂ ಚಿತ್ರರಂಗದ ಹಿರಿಯ ನಟಿ ಕೆಪಿಎಸಿ ಲಲಿತಾ ಅವರನ್ನು ವಯೋಸಹಜ ಕಾಯಿಲೆಯಿಂದಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

74 ವರ್ಷದ ಲಲಿತಾ ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು 10 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿಯನ್ನು ಮೊದಲು ತ್ರಿಶೂರ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಭಾನುವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಟಿಯನ್ನು ಆಸ್ಪತ್ರೆಗೆ ಸೇರಿಸಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಮಗಳು ಈಗ ಪುಣೆಯಿಂದ ಬಂದು ಅವರೊಂದಿಗೆ ಇದ್ದಾರೆ.

ಲಲಿತಾ ಅವರ ಆರೋಗ್ಯ ಬಗ್ಗೆ,ಅವರ ಮಗ ಮತ್ತು ನಿರ್ದೇಶಕ ಸಿದ್ಧಾರ್ಥ್ ಭರತನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದು ಅವರ ತಾಯಿ ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. “ಅಮ್ಮ ಚೆನ್ನಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ.  ಗಾಬರಿಯಾಗುವ ಅಗತ್ಯವಿಲ್ಲ.  ಪ್ರೀತಿ, ಕಾಳಜಿ ಮತ್ತು ಪ್ರಾರ್ಥನೆಗಾಗಿ ಎಲ್ಲರಿಗೂ ಧನ್ಯವಾದಗಳು.” ಎಂದು ಫೇಸ್ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

ನಟಿ ಕೆಪಿಎಸಿ ಲಲಿತಾ ಅವರ ಬಗ್ಗೆ ಹೇಳುವುದಾದರೆ, ಅವರು 1978ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು 550 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದು ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top