fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ವಿರೋಧದ ಬಳಿಕ ಎಚ್ಚೆತ್ತುಕೊಂಡ ಕೆನೆರಾ ಬ್ಯಾಂಕ್: ಕನ್ನಡಿಗನ ಮೇಲೆ ದರ್ಪ ತೋರಿದ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಸೂಚನೆ

2014ರ ನಂತರ ಬದಲಾದ ಐಬಿಪಿಎಸ್ ನಿಯಮಗಳ ಪರಿಣಾಮ ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರಿಗಿಂತ ಹೊರರಾಜ್ಯದ ಸಿಬ್ಬಂದಿಗಳೇ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಹೀಗೆ ಎಲ್ಲೆಲ್ಲಿಂದಲೋ ಬಂದು ಕನ್ನಡ ಕಲಿಯದೇ ಪರ ಭಾಷೆಗಳಲ್ಲೇ ವ್ಯವಹಾರ ನಡೆಸಿ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸೋದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಕನ್ನಡನಾಡಿನ ಗ್ರಾಮೀಣ ಭಾಗದ ಜನರು ಸೇರಿದಂತೆ ನಗರ ಪ್ರದೇಶದ ಜನರು ಕೂಡ ಬಾರದ ಭಾಷೆಯಿಂದ ಬ್ಯಾಂಕ್ ಗಳಲ್ಲಿ ಸರಿಯಾಗಿ ವ್ಯವರಿಸಲು ಪರದಾಡುವ ಸ್ಥಿತಿ ಎದುರಾಗಿದೆ.

ಭಾಷೆಯ ವಿಚಾರವಾಗಿ ಕನ್ನಡಿಗ ಗ್ರಾಹಕರ ಮೇಲೆ ಹಿಂದಿವಾಲಾ ಬ್ಯಾಂಕ್ ಅಧಿಕಾರಿ ರೌಡಿಸಂ ನಡೆಸಿರುವ ಮತ್ತೊಂದು ಘಟನೆ ಎರಡ್ಮೂರು ದಿನಗಳಿಂದ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಕೆನೆರಾ ಬ್ಯಾಂಕ್ ನಲ್ಲಿ.. ಈ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬ ಸ್ಥಳೀಯ ಗ್ರಾಹಕನೊಬ್ಬನ ಮೇಲೆ ಗೂಂಡಾಗಿರಿ ನಡೆಸಿದ್ದು ಅಹಂಕಾರಿ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

 

 

ವೈರಲ್ ವಿಡಿಯೋದಲ್ಲಿ ಇರುವುದೇನು?
ಖಾತೆ ತೆರೆಯಲು ಬುಕ್ಕಾಪಟ್ಟಣದ ಕೆನೆರಾ ಬ್ಯಾಂಕ್ ಹೋದ ರೈತ ಅಲ್ಲಿರುವ ಅಧಿಕಾರಿಯ ಬಳಿ ಖಾತೆ ತೆರೆಯಲು ಅಪ್ಲಿಕೇಶನ್ ಕೊಡುವಂತೆ ಕನ್ನಡದಲ್ಲಿ ಕೇಳುತ್ತಾರೆ. ಆದರೆ ಕನ್ನಡ ತಿಳಿಯದ ಹಿಂದಿ ಅಧಿಕಾರಿ ನೇರವಾಗಿ ರೈತನ ಮೇಲೆ ಎರಗಿ ಬಿದ್ದು ಹಿಂದಿ ಮಾತನಾಡುವಂತೆ ಅವಾಜ್ ಹಾಕುತ್ತಾನೆ. ಆಗ ರೈತನು “ನೀವು ಕನ್ನಡದಲ್ಲಿ ಮಾತನಾಡಿ” ಎಂದು ವಿನಯವಾಗಿ ಕೇಳಿಕೊಂಡರೂ ಅನುಚಿತವಾಗಿಯೇ ವರ್ತಿಸುವ ಅಧಿಕಾರಿ “ಬ್ಯಾಂಕ್ ನಿಂದ ಆಚೆ ಹೋಗು, ಇಲ್ಲದಿದ್ದರೆ ಪೊಲೀಸರನ್ನ ಕರೆಸುತ್ತೇನೆ” ಎಂದು ರೈತನ ಮೇಲೆ ಧಮ್ಕಿ ಹಾಕುತ್ತಾನೆ.

ಬ್ಯಾಂಕ್ ಅಧಿಕಾರಿಯ ದಬ್ಬಾಳಿಕೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರ ಗಮನಕ್ಕೆ ಬಂದು ಕೂಡಲೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೋವನ್ನು ಶೇರ್ ಮಾಡಿ ಕೆನರಾ ಬ್ಯಾಂಕ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ ಸದರಿ ವಿಚಾರದ ಬಗ್ಗೆ ಗಮನಹರಿಸುವಂತೆ ಆಗ್ರಹಿಸಿದ್ದರು.

 

 

“ನಿರ್ಮಲಾ ಸೀತಾರಾಮನ್ ಅವರೇ, IBPS ಪರೀಕ್ಷೆಯ ಬದಲಾದ ನಿಯಮಗಳಿಂದ ಕರ್ನಾಟಕದ ಪ್ರದೇಶಗಳ ಮೇಲೆ ಆಗಿರುವ ದುಷ್ಪರಿಣಾಮಗಳ ಮತ್ತೊಂದು ನಿದರ್ಶನವನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಕೆನರಾ ಬ್ಯಾಂಕ್‌ನ ಅಧಿಕಾರಿಯೊಬ್ಬರು ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಗ್ರಾಹಕರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಬ್ಯಾಂಕ್‌ನಿಂದ ಹೊರಹೋಗುವಂತೆ ಕೇಳಿದ್ದಾರೆ. ಹಣಕಾಸು ಸಚಿವಾಲಯ, ಭಾರತ ಸರ್ಕಾರ ಇದನ್ನು ನೀವು ಬೆಂಬಲಿಸುತ್ತೀರಾ?” ಎಂದು ಸಂಸದ ಜಿಸಿ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಸದರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ ಬಳಿಕ ವಿಡಿಯೋ ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಾದ್ಯಂತ ಹಬ್ಬಿ ಕೆನರಾ ಬ್ಯಾಂಕ್ ವಿರುದ್ಧ ಎಲ್ಲೆಡೆ ವಿರೋಧ ಅಸಮಧಾನ ವ್ಯಕ್ತವಾಗಿತ್ತು. ಕನ್ನಡಿಗರ ಆಕ್ರೋಶದ ನಂತರ ಕೊನೆಗೂ ಎಚ್ಚೆತ್ತುಕೊಂಡ ಕೆನೆರಾ ಬ್ಯಾಂಕ್ ಇದೀಗ ಕನ್ನಡಿಗರ ಬಳಿ ಸ್ಪಷ್ಟನೆ ನೀಡಿದ್ದು ಮುಂದೆ ಈ ರೀತಿಯ ತಪ್ಪುಗಳಾಗದಂತೆ ಭರವಸೆ ನೀಡಿದೆ.

 

 

ಸಂಸದ ಜಿಸಿ ಚಂದ್ರಶೇಖರ್ ಅವರ ಫೇಸ್ಬುಕ್ ಮತ್ತು ಟ್ವಿಟರ್ ಪೋಸ್ಟ್ ಗಳಿಗೆ ಕೆನೆರಾ ಬ್ಯಾಂಕ್ ಅಧಿಕೃತ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. “ಕೆನರಾ ಬ್ಯಾಂಕ್‌ನಲ್ಲಿ ನಾವು ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಬಳಸುತ್ತೇವೆ ಮತ್ತು ಎಲ್ಲರ ಭಾವನೆಗಳನ್ನು ಗೌರವಿಸುತ್ತೇವೆ. ನಾವು ನಮ್ಮ ಗ್ರಾಹಕರಿಗೆ ಯಾವಾಗಲೂ ಆದ್ಯತೆ ನೀಡುತ್ತೇವೆ. ಪ್ರತಿಯೊಬ್ಬ ಗ್ರಾಹಕರ ವಿಶ್ವಾಸವನ್ನು ಗೆಲ್ಲಲು ಕೆಲಸ ಮಾಡುತ್ತಿವೆ. ಸದರಿ ಘಟನೆಯ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುದಕ್ಕಾಗಿ ನಾವು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು ಸಿಬ್ಬಂದಿಯ ಮೇಲೆ ಸರಿಯಾದ ಕ್ರಮ ಕೈಗೊಳ್ಳುತ್ತೇವೆ” ಎಂದು ಕೆನೆರಾ ಬ್ಯಾಂಕ್ ಹೇಳಿದೆ..

ಇನ್ನು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ಬ್ಯಾಂಕ್ ಅಧಿಕಾರಿಗಳ ದರ್ಪವನ್ನು ಅಡಗಿಸಲು ಧ್ವನಿ ಎತ್ತಿದ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ನೆಟ್ಟಿಗರು ಕೃತಜ್ಞತೆ ತಿಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top