fbpx
ಸಮಾಚಾರ

ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಹೇಳಿಕೆ; ಕ್ಷಮೆಯಾಚಿಸಿದ ‘ನಾದಬ್ರಹ್ಮ’

ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೀಡಾದ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಅಂಬೇಡ್ಕರ್ ವಿಚಾರವನ್ನು ಕೂಡ ಉಲ್ಲೇಖಿಸಿದ್ದರು. ಇಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು.

ಹಂಸಲೇಖ ಅವರು ಈಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಆ ವೇಳೆ ಅವರು ದಲಿತರು, ಅಸ್ಪೃಶ್ಯತೆ ಕುರಿತಂತೆ ಮಾತಾನಾಡಿದ್ದರು, ಜೊತೆಗೆ ಪೇಜಾವರ ಶ್ರೀಗಳ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

 

 

‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ..’ ಎಂದು ಹೇಳಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ಅವರು ಮಾತನಾಡಿದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ಸಾಕಷ್ಟು ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಕೆಲವರು ಹಂಸಲೇಖ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದರೆ, ಇನ್ನೂ ಕೆಲವರು, ‘ಹಂಸಲೇಖ ಕ್ಷಮೆ ಕೇಳಬೇಕು. ಬಿಳಿಗಿರಿ ರಂಗಯ್ಯ, ಪೇಜಾವರ ಶ್ರೀಗಳ ಬಗ್ಗೆ ವ್ಯಂಗ್ಯ ಮಾತನಾಡಿದ್ದು ಸರಿಯಲ್ಲ..’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕ್ಷಮೆ ಕೇಳದಿದ್ದರೆ ಪರಿಣಾಮ ಸರಿಯಿರಲ್ಲ ಎಂದು ಎಚ್ಚರಿಕೆ ನೀಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಂಸಲೇಖ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿರುವ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಮೊದಲಿಗೆ ಕ್ಷಮೆ ಇರಲಿ, ಎರಡನೇದಾಗಿಯೂ ಕ್ಷಮೆ ಇರಲಿ.. ಎಲ್ಲ ಮಾತುಗಳು ವೇದಿಕೆಗೆ ಅಲ್ಲ ಅನ್ನೋದು ನನಗೆ ಗೊತ್ತಿದೆ, ತಪ್ಪು. ಅದು ಒಂದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಆ ವೇದಿಕೆ ಮೇಲೆ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವಂತೆ ಇರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ತಪ್ಪು. ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕೋದಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಗುರು-ಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ.” ಎಂದು ಹಂಸಲೇಖ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top