fbpx
ಸಮಾಚಾರ

“ನಮ್ಮ ರಾಜ್ಯದ ಮೆಡಿಕಲ್ ಸೀಟುಗಳು ನಮ್ಮ ಮಕ್ಕಳಿಗೆ ಸಿಗದಿದ್ದರೆ, NEET ಬರೆದು ಏನು ಪ್ರಯೋಜನ” ಸಿಎಂಗೆ ಸಂಸದ ಜಿಸಿ ಚಂದ್ರಶೇಖರ್ ಪ್ರಶ್ನೆ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಈಗ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಏಕರೂಪ ಕೌನ್ಸಲಿಂಗ್ ನಡೆಯುತ್ತಿರುವುದರಿಂದ ರಾಜ್ಯದ ವಿದ್ಯಾರ್ಥಿಗಳ ಸೀಟುಗಳು ಹೊರರಾಜ್ಯದವರ ಪಾಲಾಗುತ್ತಿದೆ. ಇಂಥ ತಲೆಕೆಟ್ಟ ನಿಯಮಗಳಿಂದ ಕರ್ನಾಟಕದ ಅದೆಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸು ನುಚ್ಚುನೂರಾಗುತ್ತಿವೆ. ಸರ್ಕಾರಿ ಸೀಟು ಪಡೆಯಲು ಅರ್ಹತೆ ಇದ್ದರೂ ಸಹ ಬದಲಾದ ನಿಯಮಾವಳಿಗಳಿಂದ ಕನ್ನಡಿಗರಿಗೆ ಸೀಟುಗಳು ಕೈತಪ್ಪುತ್ತಿದೆ. ಇದರಿಂದ ಪ್ರತಿಭಾನ್ವಿತ ಯುವಕರು ಬೇಸರವನ್ನು ಹೊರಹಾಕುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪರವಾಗಿ ಸಂಸದ ಜಿಸಿ ಚಂದ್ರಶೇಖರ್ ಧ್ವನಿಯೆತ್ತಿದ್ದಾರೆ.

ಪಿಯುಸಿಯಲ್ಲಿ 96%, 97%, 98% ಅಂಕಗಳನ್ನ ಪಡೆದಿದ್ದರೂ ಸಹ ನೀಟ್ ಪರೀಕ್ಷೆಯಲ್ಲಿ ಪರರಾಜ್ಯದವರೇ ಹೆಚ್ಚು ಬರೆಯುವುದರಿಂದ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರೀ ಸೀಟುಗಳು ಕೈಪಟ್ಟುತ್ತಿವೆ. ಇದು ಸಾಮಾನ್ಯವಾಗಿ ಕರ್ನಾಟಕಾದ್ಯಂತ ಅಸಮಾಧಾನಕ್ಕೆ ಕಾರಣವಾಗಿದ್ದು ಸರ್ಕಾರದ ಈ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಮಾತ್ರ ಕ್ಯಾರೇ ಎಂದಿರಲಿಲ್ಲ. ಈಗ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ವಿದ್ಯಾರ್ಥಿಗಳ ಪರವಾಗಿ ಧ್ವನೀಯೆತ್ತಿದ್ದಾರೆ.

 

 

ಪುಯುಸಿಯಲ್ಲಿ 99% ಅಂಕ ಪಡೆದಿದ್ದರೂ ಮೆಡಿಕಲ್ ಸೀಟ್ ವಂಚಿತರಾಗಿರುವ ವಿದ್ಯಾರ್ಥಿಯೊಬ್ಬ ಅಂಕಪಟ್ಟಿಯನ್ನು ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿರುವ ಜಿಸಿ ಚಂದ್ರಶೇಖರ್ “ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗೆ ನೀಟ್ ನಲ್ಲಿ ಸೀಟ್ ಸಿಗುತ್ತಿಲ್ಲ. ನಮ್ಮ ರಾಜ್ಯದಲ್ಲೇ ಇರುವ ಮೆಡಿಕಲ್ ಕಾಲೇಜಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೇ ಸೀಟ್ ಸಿಗಲಿಲ್ಲ ಅಂದರೆ ನೀಟ್ ಬರೆದು ಏನು ಪ್ರಯೋಜನ. ಮುಂಚೆ ದೇಶದ ಉನ್ನತ ಪರೀಕ್ಷೆಗಳಲ್ಲಿ ಒಂದಾಗಿದ್ದ NEET ನಮ್ಮಲ್ಲೇ ಇತ್ತು. ಈಗ ಕೇಂದ್ರೀಕೃತ ನೀತಿಗೆ ದಾಸರಾಗಿ ಅದು ನಮ್ಮ ಕೈತಪ್ಪಿದೆ. ಅರ್ಹತೆ ಇದ್ದರೂ ನಮ್ಮ ಮಕ್ಕಳಿಗೆ ಸೀಟ್ ಸಿಗುತ್ತಿಲ್ಲ ಅಂದ್ರೆ ಇದಕ್ಕಿಂತ ಘೋರ ಸಂಗತಿ ಮತ್ತೊಂದಿಲ್ಲ.” ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಮತ್ತೊಂದು ಪೋಸ್ಟ್ ನಲ್ಲಿ, ಪುಯುಸಿಯಲ್ಲಿ 96% ಪಡೆದಿದ್ದರೂ ನೀಟ್ ನಲ್ಲಿ ಅಂಕ ಇಲ್ಲದ ಕಾರಣ ಮೆಡಿಕಲ್ ಸೀಟಿನಿಂದ ವಂಚಿತಳಾಗಿ ಮನನೊಂದು ವಿದ್ಯಾರ್ಥಿನೀ ಆತ್ಮಹತ್ಯೆ ಮಾಡಿಕೊಂಡ ದಿನಪತ್ರಿಕೆಯ ತುಣಕನ್ನು ಕೂಡ ಹಂಚಿಕೊಂಡಿರುವ ಜಿಸಿ ಚಂದ್ರಶೇಖರ್ , “ಮಾನ್ಯ ಮುಖ್ಯಮಂತ್ರಿಗಳೇ, ಬರಿ 7% ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು NEET ರ‍್ಯಾಂಕ್ ಗಳಿಸಿದ್ದಾರೆ. NEET ಇಲ್ಲದ ಸಮಯದಲ್ಲಿ #CET ನಲ್ಲಿ ಇದು 75% ಆಗಿತ್ತು.
2014 ರಿಂದ #IBPSmosa ಕೇಂದ್ರೀಕೃತ ನೀತಿಗೆ ದಾಸರಾಗಿ ಇಂದು ಕರ್ನಾಟಕ ಬ್ಯಾಂಕ್ ಗಳಲ್ಲಿ ಕನ್ನಡ ಮಾಯವಾಗಿದೆ, ಮುಂದೆ ಈ NEET ನಿಂದ ಆಸ್ಪತ್ರೆಯಲ್ಲಿ ಕನ್ನಡ ಮಾಯ?” ಕರ್ನಾಟಕ ಸರ್ಕಾರ ಏನು ಮಾಡುತ್ತಿದೆ! ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಏನಿದು ಬದಲಾದ ನಿಯಮ?
ಭಾರತದಲ್ಲಿ ಎಲ್ಲಿಯಾದರೂ ವೈದ್ಯಕೀಯ ಅಥವಾ ದಂತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ತೆಗೆದುಕೊಳ್ಳಬೇಕಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ನಿಬಂಧನೆಗಳ ಪ್ರಕಾರ – ರಾಜ್ಯ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಮತ್ತು ದಂತ ಕಾಲೇಜುಗಳು ಅಖಿಲ ಭಾರತಕ್ಕೆ ಡಿಪ್ಲೊಮಾ ಮತ್ತು ಪದವಿಪೂರ್ವ ಕೋರ್ಸ್‌ಗಳಲ್ಲಿ 15% ಸೀಟುಗಳ ಕೋಟಾ ಮೀಸಲಿಡಬೇಕು. ಈ ಕೋಟಾಗೆ ದೇಶಾದ್ಯಂತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಕೋರ್ಸ್‌ಗಳಲ್ಲಿ, ಖಾಸಗಿ ಮತ್ತು ರಾಜ್ಯ ಸರ್ಕಾರಿ ಕಾಲೇಜುಗಳು 50% ಸೀಟುಗಳ ಕೋಟಾ ಮೀಸಲಿಡಬೇಕು.

ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ನಮ್ಮ ರಾಜ್ಯದ ಮಕ್ಕಳಿಗೆ ಆದ್ಯತೆ ನೀಡುತ್ತಿಲ್ಲ ಬದಲಾಗಿ ಹೊರಗಿನವರಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಇದರಿಂದಾಗಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕನ್ನಡದ ವಿದ್ಯಾರ್ಥಿಗಳಿಗೂ ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಸಿಗದಂತಾಗುತ್ತದೆ.

ಕರ್ನಾಟಕದಲ್ಲಿ ಅತಿ ಕಡಿಮೆಗೆ ವೈದ್ಯಕೀಯ ಶಿಕ್ಷಣ ಸಿಗುತ್ತಿರುವುದರಿಂದ ಬಾರಿ ಪ್ರಮಾಣದ ಬೇಡಿಕೆ ಹೆಚ್ಚಾಗಿದ್ದು, ವೈದ್ಯಕೀಯ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಜಾಸ್ತಿಯಾಗಿ ಸ್ಪರ್ಧೆ ಏರ್ಪಟ್ಟಿದೆ. ರಾಜ್ಯದಲ್ಲಿ ಖಾಸಗಿ ಮತ್ತು ಸರಕಾರಿ ಕಾಲೇಜುಗಳಲ್ಲಿ ಸಾಕಷ್ಟು ವೈದ್ಯಕೀಯ ಸೀಟುಗಳಿವೆ. ಸರಕಾರಿ ಕಾಲೇಜುಗಳಲ್ಲಿ ನಮ್ಮ ರಾಜ್ಯದವರಿಗೆ ಶೇ. 85 ಸೀಟುಗಳನ್ನು ನೀಡಲಾಗ್ತುತದೆ. ಉಳಿದಿದ್ದು ಎಲ್ಲ ರಾಜ್ಯಗಳಲ್ಲಿ ಇರುವಂತೆ ರಾಷ್ಟ್ರಮಟ್ಟದ ಸೀಟುಗಳಾಗಿರುತ್ತವೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಶೇ.60 ಸೀಟುಗಳನ್ನು ಬೇರೆ ರಾಜ್ಯದವರಿಗೆ ನೀಡಲಾಗುತ್ತಿದೆ.

ಅದೇ ರೀತಿ ಪರೀಕ್ಷೆ ನೀಟ್‌ಗೆ ಪ್ರಾದೇಶಿಕ ಭಾಷೆಗಳಲ್ಲಿ ಉತ್ತರ ಬರೆಯುವ ಅವಕಾಶ ಕಲ್ಪಿಸಲಾಗಿದೆ. ನಾನಾ ರಾಜ್ಯಗಳ ಅಭ್ಯರ್ಥಿಗಳಿಗೆ ಅವರ ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕನ್ನಡ ಭಾಷೆಯ ಅಭ್ಯರ್ಥಿಗಳಿಗೆ ಮಾತ್ರ ಅನ್ಯಾಯ ಮಾಡಲಾಗಿದ್ದು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top