fbpx
ಸಮಾಚಾರ

ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ಧ ಸಾಲೂರುಶ್ರೀ ಕಿಡಿ

ಕಳೆದ ವಾರವಷ್ಟೇ ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಗರುಡಗಮನ ವೃಷಭವಾಹನ’ ಚಿತ್ರವೂ ಹಿಂದೂಗಳ ಕೆಂಗಣ್ಣಿಗೆ ತುತ್ತಾಗಿದೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿರುವ ಈ ಸಿನಿಮಾದ ಶೈಲಿ, ಕಥಾವಸ್ತು, ಹೊಸತನಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈ ಮಧ್ಯೆ ಸಿನಿಮಾ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ಆರೋಪ ಕೇಳಿಬಂದಿದೆ.

‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಕೌರ್ಯದ ದೃಶ್ಯಕ್ಕೆ ಮಾದೇಶ್ವರ ಸ್ವಾಮಿ ಕುರಿತ ಜನಪದ ಹಾಡು ಬಳಕೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೊಲೆ ದೃಶ್ಯಕ್ಕೆ ಮಹದೇಶ್ವರ ಸ್ವಾಮಿ ಕುರಿತು ಜನಪದ ಹಾಡನ್ನು ಏಕೆ ಬಳಸಿದ್ದಾರೆ? ವಿಕೃತ ಮೆರೆಯುವ ದೃಶ್ಯಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ ಅಕ್ಷಮ್ಯ ಎಂದು ಖಂಡಿಸಿದ್ದಾರೆ.

ಚಿತ್ರದಲ್ಲಿ ಸೋಜುಗಾದ ಸೂಜು ಮಲ್ಲಿಗೆ ಹಾಡು ಬಳಕೆಗೆ ಮಾದಪ್ಪನ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಮಲೈಮಹದೇಶ್ವರರ ಭಕ್ತಿಗೀತೆಯನ್ನ ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ಕೊಲೆ ಮಾಡಿ ಕುಣಿಯುವ ದೃಶ್ಯಕ್ಕೆ ಹಾಡು ಬಳಸಿರೋದು ಸರಿಯಲ್ಲ. ಸಂಬಂಧವೇ ಇರದ ದೃಶ್ಯಕ್ಕೆ ಅಸಹಜವಾಗಿ ಮಹದೇಶ್ವರನ ಹಾಡು ಬಳಕೆ ಮಾಡಲಾಗಿದೆ ಎಂದು ಚಾಮರಾಜನಗರದ ಕಲಾವಿದರು ಹಾಗೂ ಮಾದಪ್ಪ ಭಕ್ತರಿಂದ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಭಕ್ತರ ಆಕ್ರೋಶದಿಂದ ವಿವಾದಕ್ಕೆ ಕಾರಣವಾಗಿರುವ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜಿಗದ ಸೂಜು ಮಲ್ಲಿಗೆ ಹಾಡಿನ ವಿರುದ್ಧ ಈಗ ಮಲೆ ಮಹದೇಶ್ವರ ಬೆಟ್ಟದಲ್ಲಿನ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಿಡಿಕಾರಿದ್ದು, ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ.

ಮಲೆ ಮಹದೇಶ್ವರರು ಓರ್ವ ಪವಾಡ ಪುರುಷ. ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವವನ್ನು ಪಡೆದವರು. ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ, ಅವರು ಸಕಲ ಜೀವಿಗಳಿಗೂ ಒಳ್ಳೇಯದನ್ನೇ ಬಯಸಿ ಅಲ್ಪರಿಗೆ ಜ್ಞಾನ ನೀಡುವಂತ ಮಹಾಮಹಿಮರ ಬಗ್ಗೆ ಇರುವ ಹಾಡನ್ನು ಕ್ರೌರ್ಯಕ್ಕೆ ಬಳಸಿರುವ ನಿರ್ದೇಶಕರನ್ನು ಮಹದೇಶ್ವರರೇ ಹರಸಬೇಕಿದೆ, ಮುಂದೆ ಈ ರೀತಿಯ ಚಿಂತನೆ ಬಾರದಿರಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top