fbpx
ಸಮಾಚಾರ

ಸಂಸ್ಕೃತಕ್ಕೆ ಬೆಣ್ಣೆ, ಕನ್ನಡಕ್ಕೆ ಸುಣ್ಣ: ಕನ್ನಡಕ್ಕಾಗುತ್ತಿರುವ ಘನಘೋರ ಅನ್ಯಾಯದ ಬಗ್ಗೆ ಸಂಸತ್ ನಲ್ಲಿ ಕನ್ನಡದಲ್ಲೇ ಗುಡುಗಿದ ಸಂಸದ ಜಿಸಿ ಚಂದ್ರಶೇಖರ್

ಕನ್ನಡ ಭಾಷೆ, ಕನ್ನಡ ನಾಡಿನ ವಿಚಾರದಲ್ಲಿ ತೀವ್ರ ಕಾಳಜಿ, ಅಭಿಮಾನ ಹೊಂದಿರುವ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಸಂಸತ್ ನಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ. ಪ್ರತಿ ಭಾರಿ ಸಂಸತ್ ಅಧಿವೇಶನ ನಡೆದಾಗಲೂ ಸಂಸತ್ ನಲ್ಲಿ ಕೇಳುವ ಒಂದೇ ಒಂದು ‘ಕನ್ನಡ ಧ್ವನಿ’ ಅಂದರೆ ಅದು ಸಂಸದ ಜಿಸಿ ಚಂದ್ರಶೇಖರ್ ಅವರದ್ದು ಮಾತ್ರ ಎಂದರೆ ತಪ್ಪಾಗದು. ಕರ್ನಾಟಕದ ಸಮಸ್ಯೆಗಳ ಪರವಾದ ನಿರಂತರ ಹೋರಾಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಕನ್ನಡಿಗರ ಹೃದಯ ಸಿಂಹಸನದಲ್ಲಿ ಜಾಗ ಸಂಪಾದಿಸಿರುವ ಹೆಮ್ಮಯ ಸಂಸದ ಜಿಸಿ ಚಂದ್ರಶೇಖರ್ ಅವರು ಈಗ ಮತ್ತೊಮ್ಮೆ ಕನ್ನಡ ಭಾಷೆಗೆ ಆಗುತ್ತಿರಿವ ಘನ ಘೋರ ಅನ್ಯಾಯದ ಬಗ್ಗೆ ಸಂಸತ್ ನಲ್ಲಿ ಘರ್ಜಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ 643.84 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನವನ್ನು ಪಡೆದಿರುವ ಕನ್ನಡಕ್ಕೆ ಕೊಟ್ಟಿರುವುದು ಕೇವಲ 3.06 ಕೋಟಿ.. ಹಾಗೆಯೇ ಇತರ ತಮಿಳುಗಾಗಿ ಕೇವಲ 22.94 ಕೋಟಿ ರೂ., ತೆಲುಗಿಗೆ 3.06 ಕೋಟಿ ರೂ.ಗಳನ್ನ ಮಾತ್ರ ಕೇಂದ್ರ ನೀಡಿದೆ. ಇದರರ್ಥ ಸಂಸ್ಕೃತದ ಹೊರತುಪಡಿಸಿ ಇತರ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನವನ್ನು ಪಡೆದಿರುವ ಮೂರು ಭಾಷೆಗಳಿಗೆ ಒಟ್ಟು 29 ಕೋಟಿ ರೂ. ಖರ್ಚು ಮಾಡಿದೆ. ಈ ಘನಘೋರ ಅನ್ಯಾಯದ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಸಂಸತ್ ನಲ್ಲಿ ಧ್ವನಿಯೆತ್ತಿದ್ದಾರೆ.

2011 ರ ಜನಗಣತಿಯ ಮಾಹಿತಿಯ ಪ್ರಕಾರ, ಸಂಸ್ಕೃತವನ್ನು ತಮ್ಮ ಮಾತೃಭಾಷೆಯಾಗಿ ನೋಂದಾಯಿಸಿಕೊಂಡಿದ್ದವರು ಕೇವಲ 24,821 ಜನರು ಅಷ್ಟೇ. ಆದರೆ ಬರೋಬ್ಬರಿ ಏಳುವರೆ ಕೋಟಿ ಕನ್ನಡಿಗರನ್ನ ಹೊಂದಿರುವ ಕನ್ನಡ ಭಾಷೆಯನ್ನೂ ಸೇರಿದಂತೆ ಇತರ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಭಾಷೆಗಳ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ದೋರಣೆಯ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಬೆಳಕು ಚೆಲ್ಲಿದ್ದಾರೆ.

ಇಂದು ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ ಜಿಸಿ ಚಂದ್ರಶೇಖರ್ ಅವರು ನಾಡಗೀತೆಯಲ್ಲಿ ದೇಶಪ್ರೇಮ ಸಾರುವ ”ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂಬ ಸಾಲನ್ನು ಹೇಳಿ ಅದಕ್ಕೆ ಆಂಗ್ಲ ಭಾಷೆಯಲ್ಲಿ ಅರ್ಥವನ್ನು ವಿವರಿಸುವ ಮೂಲಕ ಮಾತನ್ನು ಆರಂಭಿಸಿದರು., ಬಳಿಕ ಭಾಷಾ ಅಭಿವೃದ್ಧಿ ವಿಚಾರವಾಗಿ ಇತರ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳ ಮೇಲೆ ನಡೆಯುತ್ತಿರುವ ಮೂರನೆಯ ಬಗ್ಗೆ ಸದನಕ್ಕೆ ತಿಳಿಸಿದರು.

 

 

“ಕೇಂದ್ರ, ದೇಶದ 6 ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಗೌರವ ನೀಡಿದ್ದು ಈ ಸ್ಥಾನಮಾನ ಸಿಗಲು ಕನಿಷ್ಠ 1500 ವರ್ಷ ಹಳೆಯದಿರಬೇಕೆಂಬ ಷರತ್ತಿನೊಂದಿಗೆ 2 ಶತಮಾನದಲ್ಲಿ ಪ್ರಚಲಿತವಾಗಿದ್ದ ಗ್ರೀಕ್ ನಾಟಕದಿಂದ ಹಿಡಿದು 3 ನೇ, 4 ನೇ ಶತಮಾನದ ತಾಳಗುಂದ ಶಾಸನ, ಹಲ್ಮಿಡಿ ಶಾಸನ ಹೀಗೆ ನಮ್ಮ ಶ್ರೀಮಂತವಾದ ಸುಮಾರು 2000 ವರ್ಷಕ್ಕೂ ಹೆಚ್ಚಿನ ಪರಂಪರೆಯನ್ನು ಹೊಂದಿರುವ ಪ್ರಸ್ತುತ 7.5 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಜನರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೇ ಗೊತ್ತಿಲ್ಲದ ಕನ್ನಡ ಭಾಷೆಗೆ ಈ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರಿಗೂ ಗರ್ವದ ವಿಷಯವೇ ಆಗಿದೆ.” ಎಂದು ನಮ್ಮ ಕನ್ನಡ ಭಾಷೆಯ ಘಟನೆಯನ್ನು ಸಂಸದರು ಸದನಕ್ಕೆ ಸಾರಿದರು.

“ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಎಲ್ಲ ಭಾಷೆಗಳಿಗೆ ಸಮಾನ ಆದ್ಯತೆ ಕೊಡುವುದನ್ನು ಬಿಟ್ಟು ಕಳೆದ 3 ವರ್ಷಗಳಲ್ಲಿ ಕೇವಲ 28,000 ಜನರು ಮಾತಾಡುವ ಸಂಸ್ಕೃತ ಭಾಷೆ ಒಂದಕ್ಕೆ 643.84 ಕೋಟಿ ಕೊಟ್ಟಿದ್ದು ಇದಕ್ಕೆ ನನ್ನ ಅಭ್ಯಂತರವಿಲ್ಲದಿದ್ದರು 32 ಕೋಟಿ ಜನರು ಮಾತಾಡುವ ಉಳಿದ 5 ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಕೇವಲ 29 ಕೋಟಿ ಕೊಟ್ಟಿರುವುದು ಸರಿಯೇ? “ ಎಂದು ಚಂದ್ರಶೇಖರ್ ಪ್ರಶ್ನಿಸಿದರು.

“ಅದಲ್ಲದೆ 2014 ರಿಂದ 2022 ರವರೆಗೆ ತೆಗೆದುಕೊಂಡರೆ ಕನ್ನಡಕ್ಕೆ ಸಿಕ್ಕಿರುವುದು 8.39 ಕೋಟಿ, ತೆಲುಗಿಗೆ 8.36 ಕೋಟಿ ,ತಮಿಳಿಗೆ 50.88 ಕೋಟಿ ಕೊಟ್ಟರೆ ಸಂಸ್ಕೃತಕ್ಕೆ ಮಾತ್ರ 1208 ಕೋಟಿ ಕೊಟ್ಟಿದೆ. ಇದು ಮಲತಾಯಿ ಧೋರಣೆಯಲ್ಲವೇ? “ ಎಂದು ಕೇಂದ್ರದ ಈ ದೋಷಯುಕ್ತ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

“ವಿವಿಧತೆಯಲ್ಲಿ ಏಕತೆಯೇ ಈ ದೇಶದ ಲಾವಣ್ಯತೆ. ನಾವು ಎಲ್ಲಾ ಮಾತೃಭಾಷೆಗಳನ್ನು ಗೌರವಿಸುತ್ತೇವೆ,. ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆಯೇ ಶ್ರೇಷ್ಠವಾಗಿರುತ್ತದೆ. ಒಂದು ಭಾಷೆ ಸತ್ತಾಗ ನಾವು ಸಂಸ್ಕೃತಿಗಳನ್ನು, ಸಂಪೂರ್ಣ ನಾಗರಿಕತೆಗಳನ್ನು ಕಳೆದುಕೊಳ್ಳುತ್ತೇವೆ.,. ಜೊತೆಜೊತೆಗೆ ನಾವು ದೃಷ್ಟಿಕೋನಗಳು, ಆಲೋಚನೆಗಳು, ಅಭಿಪ್ರಾಯಗಳನ್ನು ಕೂಡ ಕಳೆದುಕೊಳ್ಳುತ್ತೇವೆ, ಮುಖ್ಯವಾಗಿ, ಮಾನವನ ಅನನ್ಯ ಜೀವನ ಮಾರ್ಗವನ್ನು ನಶಿಸುತ್ತದೆ” ಎಂಬ ಅದ್ಬುತ ಸಂದೇಶವನ್ನು ಸದನಕ್ಕೆ ಜಿಸಿ ಚಂದ್ರಶೇಖರ್ ನೀಡಿದರು.

 

 

ಕನ್ನಡ ಭಾಷೆಗೆ ಆಗುತ್ತಿರುವ ಮಲತಾಯಿ ದೋರಣೆಯ ಬಗ್ಗೆ ತಾವು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಡಿಯೋವನ್ನು ಜಿಸಿ ಚಂದ್ರಶೇಖರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, “2000 ವರ್ಷಕ್ಕೂ ಹಿಂದಿನ ಇತಿಹಾಸವಿರುವ 6.5 ಕೋಟಿ ಜನರು ಮಾತನಾಡುವ ಕನ್ನಡಕ್ಕೆ ಕೇಂದ್ರ 7 ವರ್ಷದಲ್ಲಿ ಕೊಟ್ಟಿರುವುದು 8.39 ಕೋಟಿ ಮಾತ್ರ! ಇದನ್ನ ಸರಿಪಡಿಸಲು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ನಾನು ಮಾಡಿದ ಮನವಿ” ಎಂಬ ಒಕ್ಕಣೆಯನ್ನು ಚಂದ್ರಶೇಖರ್ ಅವರು ಬರೆದುಕೊಂಡಿದ್ದಾರೆ..

ಸದ್ಯ ಚಂದ್ರಶೇಖರ್ ಅವರು ಕನ್ನಡ ಭಾಷಾ ವಿಚಾರವಾಗಿ ಸಂಸತ್ ನಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕನ್ನಡಿಗರ ಮನಗೆಲ್ಲುತ್ತಿದೆ. ಕನ್ನಡದ ಪರ ಧ್ವನಿ ಎತ್ತಿದ್ದಕ್ಕೆ ಚಂದ್ರಶೇಖರ್ ಅವರಿಗೆ ಕನ್ನಡಾಭಿಮಾನಿಗಳು ಕೃತಜ್ಞತೆ ತಿಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top