fbpx
ಸಮಾಚಾರ

ಪ್ರತಿಮೆ ಧ್ವಂಸದ ವಿರುದ್ದ ಸಂಘಟಿತ ಹೋರಾಟದಲ್ಲಿ ಮರಾಠರ ಬೂಟಾಟಿಕೆಯ ವಿರುದ್ದ ಒಂದಾಯಿತು ಸ್ಯಾಂಡಲ್‌ವುಡ್

ಎಂಇಎಸ್ ಮತ್ತು ಶಿವಸೇನೆಯ ಪುಂಡಾಟಿಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾಷೆಯ ವಿಚಾರದಲ್ಲಿ ನಡೆದ ಗಲಭೆಗಳು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಕಾರ್ಯಕರ್ತರು ಬೆಂಕಿ ಹಚ್ಚುವಲ್ಲಿಯವರೆಗೆ ಹೋಗಿ ನಿಂತಿತ್ತು. ಇದಾದ ಬಳಿಕ ಇಷ್ಟಕ್ಕೇ ಸುಮ್ಮನಾಗದ ಪುಂಡರು ಮಹಾರಾಷ್ಟ್ರದಲ್ಲಿದ್ದ ಕರ್ನಾಟಕ ಬಸ್ಸುಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡುವಲ್ಲಿಯವರೆಗೆ ತಲುಪಿದ್ದರು. ಅಷ್ಟೇ ಅಲ್ಲದೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಗೂಂಡಾಗಳು ಭಗ್ನಗೊಳಿಸಿದ್ದಾರೆ. ಇವೆಲ್ಲವನ್ನೂ ಕಾನೂನಿನ ಮೂಲಕ ಹತ್ತಿಕ್ಕಬೇಕಾದ ಉದ್ದವ್ ಠಾಕ್ರೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಇದೆಲ್ಲದರಿಂದ ಕನ್ನಡಿಗರ ಆಕ್ರೋಶ ಭುಗಿಲೆದ್ದಿದ್ದು ಇದೀಗ ಕನ್ನಡ ಚಿತ್ರರಂಗ ಈ ಪುಂಡರ ವಿರುದ್ದ ಸಮರ ಸಾರಿದೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಚಿತ್ರನಟರ ಅಭಿಪ್ರಾಯಗಳು ಹೀಗಿವೆ.
ಘಟನೆಯನ್ನು ಖಂಡಿಸಿ ಪ್ರತಿಕ್ರಿಯಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ “ಭಾಷೆಗಾಗಿ ಪ್ರಾಣ ಕೊಡುವುದಕ್ಕೂ ಸಿದ್ದ. ಬಾವುಟ ಸುಡುವುದು ತಾಯಿಯನ್ನು ಸುಟ್ಟಂತೆ. ಕನ್ನಡಿಗರಿಗೆ ಪವರ್ ಇಲ್ಲ ಎಂದುಕೊಳ್ಳಬೇಡಿ. ಯಾವ ರಾಜ್ಯದಲ್ಲಿ ಯಾವ ಬಾಷೆ ಇದೆಯೋ, ಅದಕ್ಕೆ ಗೌರವ ಕೊಡೋದು ಧರ್ಮ. ಸರ್ಕಾರಗಳೂ ರಾಜಕೀಯ ಬದಿಗಿಟ್ಟು ಗಮನ ಕೊಡಬೇಕು. ಬರೀ ವೋಟಿಗಾಗಿ ಕಾಯೋದ್ರಲ್ಲಿ ಅರ್ಥ ಇಲ್ಲ” ಅಂತ ಹೇಳಿದ್ದಾರೆ.

ದುನಿಯಾ ವಿಜಯ್ ಮಾತನಾಡಿ “ಕನ್ನಡ ಬಾವುಟ ಸುಟ್ಟಿರೋದು ನೋಡ್ಕೊಂಡು ಸುಮ್ಮನೆ ಇರೋಕೆ ಆಗ್ತಾ ಇಲ್ಲ. ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಲೇಬೇಕು.” ಎಂದು ಒತ್ತಾಯಿಸಿದ್ದಾರೆ. ಡಾಲಿ ಧನಂಜಯ್ ಈ ಘಟನೆಯನ್ನು ಖಂಡಿಸಿ “ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರೋ ದಬ್ಬಾಳಿಕೆಗಳು ನಿಲ್ಲಬೇಕು. ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ಮರಾಠಿಗರೂ ಇದ್ದಾರೆ ಎನ್ನುವುದನ್ನು ಮರೆಯಬಾರದು.” ಎಂದು ಹೇಳಿದ್ದಾರೆ.

ಪ್ರಜ್ವಲ್ ದೇವರಾಜ್ ಈ ಬಗ್ಗೆ “ಬಾವುಟ ಸುಡುವಂತಹಾ ಘಟನೆಗಳು ನಡೆದಾಗ ನಾವೆಲ್ಲ ಒಗ್ಗಟ್ಟಾಗಿ ಧ್ವನಿಯೆತ್ತಬೇಕು” ಎಂದು ಇತರರನ್ನು ಒತ್ತಾಯಿಸಿದರೆ ನೆನಪಿರಲಿ ಪ್ರೇಮ್ “ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು. ಚಿತ್ರರಂಗ ಹೋರಾಟಕ್ಕೆ ಧುಮುಕಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಹೋರಾಟ ಉಗ್ರರೂಪ ಪಡೆಯಲಿದೆ. ಹೀಗಾಗಿ ಚಿತ್ರರಂಗ ಶಾಂತಿ ಮಂತ್ರ ಪಠಿಸುತ್ತಿದೆ. ಕನ್ನಡಿಗರು ಮತ್ತು ಮರಾಠಿಗರ ಬಾಂಧವ್ಯ ಹಾಳು ಮಾಡಬೇಡಿ.” ಎಂದು ಮಹಾರಾಷ್ಟç ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇಂದ್ರಜಿತ್ ಲಂಕೇಶ್ “ನಾನು ಟ್ವಿಟರ್ ಹೋರಾಟದ ವಿರೋಧಿ. ಹೀಗಾಗಿ ಬೆಳಗಾವಿಗೆ ಹೋಗಿ ಹೋರಾಟದಲ್ಲಿ ಭಾಗವಹಿಸುತ್ತೇನೆ. ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗ ಹೋರಾಟಕ್ಕಿಳಿಯಬೇಕು” ಎಂದು ಆಗ್ರಹಿಸಿದ್ದಾರೆ. ತಾರಾ ಮಾತನಾಡಿ “ನಮ್ಮ ಮಧ್ಯೆ ಬಾವುಟ ಸುಡುವ ಮನಸ್ಸುಗಳಿವೆ ಅಂದ್ರೆ ಆಶ್ಚರ್ಯವಾಗುತ್ತೆ. ಅಂತಹ ಕೆಟ್ಟ ಮನಸ್ಸುಗಳಿಗೆ ನನ್ನ ಧಿಕ್ಕಾರ” ಎಂದು ಧಿಕ್ಕಾರ ಕೂಗಿದ್ದಾರೆ.

“ಮರಾಠಿಗರಿಗಾಗಿ ನಾವು ಏನೆಲ್ಲ ಮಾಡಿದ್ದೇವೆ. ಏರಿಯಾಗಳನ್ನೇ ಬಿಟ್ಟುಕೊಟ್ಟಿದ್ದೇವೆ. ಮರಾಠಿಗರ ಪ್ರತಿಮೆಗಳು ಕರ್ನಾಟಕದಲ್ಲಿವೆ. ಆದರೆ, ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಯಾವ ಸ್ಥಾನವಿದೆ? ನಾವು ಸುಮ್ಮನಿದ್ದರೆ ಸುಮ್ಮನಿರುತ್ತೇವೆ. ಎದ್ದು ನಿಂತರೆ ನಾವು ಏನು ಅನ್ನೋದನ್ನ ತೋರಿಸಿಯೇ ತೋರಿಸುತ್ತೇವೆ” ಎಂದು ರಂಗಾಯಣ ರಘು ಅಸಮಾಧಾನ ಹೊರ ಹಾಕಿದ್ದಾರೆ. ಕನ್ನಡಿಗರೆಲ್ಲರೂ ಈ ಘಟನೆಯ ಬಗ್ಗೆ ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆ ಕೊನೆಗೂ ಬಂದಿದೆ. ಈಗಲಾದರು ನಾವು ಪಕ್ಷ ಮರೆತು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top