fbpx
ಸಮಾಚಾರ

ಜಾತಿಯ ಹೆಸರಿನಲ್ಲಿ ಊಟ ಮುಟ್ಟದ ಮಕ್ಕಳು. ವಿವಿಧತೆಯ ತವರೂರಲ್ಲಿ ಮತ್ತೊಂದು ತಲೆ ತಗ್ಗಿಸುವ ಘಟನೆ.

ಭಾರತ ವಿವಿಧತೆಯಲ್ಲಿ ಏಕತೆಯನ್ನ ಹೊಂದಿರುವ ಭೂಮಿ. ಆದರೂ ಇದು ಜಾತಿಯ ಗಲಭೆಗಳಿಗೆ ಹೊರತಾಗಿಲ್ಲ. ಸ್ವಾತಂತ್ರ‍್ಯ ಬಂದು ಎಪ್ಪತ್ತೈದು ವರ್ಷ ಕಳೆದಿದ್ದರೂ ಕೆಲವೊಂದು ಜಾತಿ, ವರ್ಗದ ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಭಾರತ ಇನ್ನೂ ನಿಲ್ಲಿಸಿಲ್ಲ. ಇದಕ್ಕೆ ಸ್ಪಷ್ಟೀಕರಣ ಎನ್ನುವಂತೆ ಶಾಲೆಯೊಂದರಲ್ಲಿ ಮೇಲ್ವರ್ಗದ ವಿದ್ಯಾರ್ಥಿಗಳು ದಲಿತ ಮಹಿಳೆ ತಯಾರಿಸಿದ ಊಟ ಎನ್ನುವ ಕಾರಣಕ್ಕಾಗಿ ಶಾಲೆಯ ಬಿಸಿಯೂಟವನ್ನು ನಿರಾಕರಿಸಿ ಪ್ರತಿಭಟಿಸಿದ ಘಟನೆ ಡೆಹ್ರಾಡೂನನಲ್ಲಿ ವರದಿಯಾಗಿದೆ. ಚಂಪಾವತ್ ಜಿಲ್ಲೆಯ ಸುಖೀಧಂಗ್ ಪ್ರದೇಶದಲ್ಲಿರುವ ಜೂಲ್ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿರುವುದು ನಿಜಕ್ಕೂ ಭವಿಷ್ಯದ ಭಾರತವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.

ಏನಿದು ಘಟನೆ?
ಕೆಲವು ದಿನಗಳ ಹಿಂದಷ್ಟೇ ಈ ಶಾಲೆಯ ಭೋಜನ ಮಾತಾ ಹುದ್ದೆಗೆ ಸುನಿತಾ ಎಂಬುವವರನ್ನು ನೇಮಕ ಮಾಡಲಾಗಿತ್ತು. ಇವರಿಗೆ ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಭೋಜನ ತಯಾರಿಸುವ ಜವಾಬ್ಧಾರಿ ಕೊಡಲಾಗಿತ್ತು. ಇವರು ದಲಿತವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಮಕ್ಕಳು ಊಟ ನಿರಾಕರಿಸಿದ್ದಾರೆ. ಇವರು ಕರ್ತವ್ಯಕ್ಕೆ ಹಾಜರಾದ ದಿನ ಎಲ್ಲಾ ಮಕ್ಕಳು ಊಟ ಸ್ವೀಕರಿಸಿದ್ದಾರೆ, ಆದರೆ ಮರುದಿನದಿಂದ ಮೇಲ್ವರ್ಗದ ವಿದ್ಯಾರ್ಥಿಗಳು ಊಟ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಸರ್ಕಾರಿ ಜಂಟಲ್ ಕಾಲೇಜಿನ ಪ್ರಾಂಶುಪಾಲ ಪ್ರೇಮ್ ಸಿಂಗ್ ತನ್ನ ಅಳಲು ತೋಡಿಕೊಂಡಿದ್ದಾರೆ.

ಶಾಲೆಯಲ್ಲಿ ಎರಡು ಅಡುಗೆಗೆ ಸಂಬoಧಿಸಿದ ಹುದ್ದೆಗಳಿದ್ದು ಶಕುಂತಲಾ ದೇವಿ ಎನ್ನುವ ಮಹಿಳೆ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ಇವರ ಜಾಗಕ್ಕೆ ಸುನಿತಾ ದೇವಿ ಬಂದಿದ್ದರು. ಸರ್ಕಾರದ ನಿಯಮಾವಳಿಗಳನ್ವಯ ಇವರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಪ್ರಾಂಶುಪಾಲರೇ ಹೇಳುವಂತೆ ಮೇಲ್ವರ್ಗದ ವಿದ್ಯಾರ್ಥಿಗಳು ಊಟ ನಿರಾಕರಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣಗಳನ್ನು ಇಲ್ಲಿಯವರೆಗೆ ನೀಡಿಲ್ಲ. ಒಟ್ಟು 57 ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಆ ಪೈಕಿ 16 ಪರಿಶಿಷ್ಟ ವಿದ್ಯಾರ್ಥಿಗಳು ಮಾತ್ರ ಊಟ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಜೊತೆ ಅವರು ಮಾಹಿತಿ ಹಂಚಿಕೊoಡಿದ್ದಾರೆ. ಈ ಭೋಜನ ಮಾತಾ ಹುದ್ದೆಗೆ 11 ಅರ್ಜಿಗಳು ಬಂದಿದ್ದು ಎಲ್ಲಾ ಅರ್ಹತೆ ಇದ್ದ ಪುಷ್ಪಾ ಭಟ್ ಎಂಬ ಮಹಿಳೆಯನ್ನು ನಾವು ಆಯ್ಕೆ ಮಾಡಿದ್ದೆವು. ಆದರೆ ಪ್ರಾಚಾರ್ಯರು ದಲಿತ ಮಹಿಳೆಯನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ ಎಂದು ಶಾಲಾ ಶಿಕ್ಷಕ ಪೋಷಕ ಸಂಘದ ಅಧ್ಯಕ್ಷರು ಆಪಾದಿಸಿದ್ದಾರೆ. ಇದನ್ನು ನೋಡಿದರೆ ಎಲ್ಲೋ ಮಕ್ಕಳನ್ನು ಈ ವಿಚಾರದಲ್ಲಿ ಹೆತ್ತವರು ಮತ್ತು ಶಿಕ್ಷಕರೇ ಛೂ ಬಿಟ್ಟಂತಿದೆ. ಇನ್ನು ಶಾಲೆಯಲ್ಲಿ ಮೇಲ್ವರ್ಗದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುವುದರಿoದ ಮೇಲ್ವರ್ಗದ ಮಹಿಳೆಯನ್ನೇ ನೇಮಕ ಮಾಡಬೇಕು ಎಂದು ಅವರೆಲ್ಲರ ಆಗ್ರಹ.

ಒಟ್ಟಿನಲ್ಲಿ ಈ ಜಾತಿ ತಾರತಮ್ಯದ ವಿಷಬೀಜವನ್ನು ಎಳೆಯ ಮಕ್ಕಳ ತಲೆಯಲ್ಲಿ ಕಟ್ಟಿಟ್ಟ ಊರಿನ ಮನಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರತರದ ಟೀಕೆಗೆ ಗುರಿಯಾಗಿದೆ. ಭವಿಷ್ಯದ ಮಕ್ಕಳು ಜಾತಿಯ ಹೆಸರಿನಲ್ಲಿ ಹಾದಿ ತಪ್ಪದಿರಲಿ ಅಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top