fbpx
ಸಮಾಚಾರ

2021ರಲ್ಲಿ ಸ್ಯಾಂಡಲ್‌ವುಡ್ ಮಂದಿಯ ಕಿರಿಕ್ ವಿಚಾರಗಳು ಈಗ ಏನಾಗಿದೆ ಗೊತ್ತಾ?

2021ರಲ್ಲಿ ಕೋವಿಡ್ ಸಂಕಷ್ಟದ ನಡುವೆಯು ಕನ್ನಡ ಚಿತ್ರರಂಗ ಅನೇಕ ಚಿತ್ರಗಳನ್ನು ಅಭಿಮಾನಿಗಳ ಮಡಿಲಿಗೆ ಹಾಕಿತ್ತು. ಇದರ ಹೊರತಾಗಿ ಸ್ಯಾಂಡಲ್‌ವುಡ್‌ನ ಹಲವು ಸದಸ್ಯರು ಅನೇಕ ವಿವಾದಗಳಿಂದಾಗಿ ಮನೆಮಾತಾದರು. ಸ್ಯಾಂಡಲ್‌ವುಡ್ ಮಂದಿಯಿಂದ  ಇಂಡಸ್ಟ್ರಿದಾಚೆಗೆ ವಿವಾದಕ್ಕೊಳಗಾದ ಕೆಲವೊಂದು ವಿಚಾರಗಳು ಇಲ್ಲಿವೆ.

1. ಚೈತ್ರ ಕೊಟ್ಟೂರ್ ಮದುವೆ ವಿಚಾರ : ಬಿಗ್ ಬಾಸ್‌ನಿಂದಾಗಿ ಬೆಳಕಿಗೆ ಬಂದ ಚೈತ್ರ ಕೊಟ್ಟೂರ್ 2021 ಮಾರ್ಚ್ 28ರಂದು ನಾಗಾರ್ಜುನ ಅವರನ್ನು ವಿವಾಹವಾದರು. ಚೈತ್ರ ಕೊಟ್ಟೂರ್ ಮದುವೆಯಾದ ಬಳಿಕ ಮದುವೆಯನ್ನು ವಿರೋಧಿಸಿ ನಾಗಾರ್ಜುನ್ ಮನೆಯವರು ಪತ್ರಿಕಾ ಹೇಳಿಕೆಗಳನ್ನು ನೀಡಿದ್ದರು. ಚೈತ್ರ ಕೊಟ್ಟೂರ್ ಅವರೂ ತನಗೆ ನಾಗಾರ್ಜುನ್ ಮನೆಯವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

2 . ಪೊಗರು ಸಿನಿಮಾ ವಿವಾದ : ಪೊಗರು ಸಿನಿಮಾ ಬಿಡುಗಡೆಯಾದಾಗ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಧ್ರುವಸರ್ಜಾ ಅಭಿನಯದಲ್ಲಿ ಬ್ರಾಹ್ಮಣ ಸಮುದಾಯವನ್ನು ತುಚ್ಚವಾಗಿ ಕಾಣಲಾಗಿದೆ ಮತ್ತು ಅವಹೇಲನ ಮಾಡಲಾಗಿದೆ ಎಂದು ಬ್ರಾಹ್ಮಣ ಸಂಘದ ಕೆಲವರು ಚಲನಚಿತ್ರ ಮಂಡಳಿಗೆ ನುಗ್ಗಿ ಗಲಾಟೆ ಮಾಡಿದ್ದರು. ಸಿನಿಮಾಗೆ ಬೆಂಬಲ ನೀಡಿ ಅಹಿಂದ ಸಂಘಟನೆಗಳು ಮತ್ತು ಧ್ರುವ ಸರ್ಜಾ ಅಬಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಕ್ಷಮೆ ಕೇಳುವ ಮೂಲಕ ವಿವಾದ ಇತ್ಯರ್ಥವಾಯಿತು.

3. ಯಶ್ ಜಮೀನು ವಿವಾದ : ಹಾಸನ ಬಲಿ ತಿಮ್ಲಾಪುರದಲ್ಲಿ ಯಶ್ ಹೊಸ ಸೈಟೊಂದನ್ನು ಖರೀದಿಸಿದ್ದರು. ಈ ಜಮೀನಿಗೆ ಕೌಪೌಂಡ್ ಹಾಕುವ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಯಶ್ ಪೋಷಕರ ನಡುವೆ ಗಲಾಟೆ ನಡೆದಿತ್ತು. ಪರಿಸ್ಥಿತಿ ಬಗ್ಗೆ ತಿಳಿದು ದೂರು ಕೊಡಲು ಪೋಲಿಸ್ ಠಾಣೆಗೆ ಹೋದ  ಯಶ್ ವರಿಗೂ ಧಿಕ್ಕಾರ ಕೂಗಲಾಯಿತು. ಊರಿಗೆ ಹೋಗುವ ದೇವಸ್ಥಾನದ ದಾರಿ ಮುಚ್ಚಲಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿತ್ತು. ಬಳಿಕ ಊರವರೊಂದಿಗೆ ಯಶ್ ಹಾಗು ಅವರ ಮ್ಯಾನೇಜರ್ ಕುಳಿತು ಮಾತನಾಡಿದ ಬಳಿಕ ಪರಿಸ್ಥಿತಿ ಸುಧಾರಿಸಿತ್ತು.

4. ಲವ್ ಯೂ ರಚ್ಚು ಸಿನಿಮಾದ ಫೈಟರ್ ಸಾವು : ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ವಿಧ್ಯುತ್ ಅವಘಡದಿಂದಾಗಿ ಸಾಹಸಿ ಕಲಾವಿದನೊಬ್ಬ ಸಾವನಪ್ಪಿದ ಘಟನೆ ದೊಡ್ಡ ಮಟ್ಟಿನ ತಲ್ಲಣವನ್ನು ಸೃಷ್ಟಿಸಿತ್ತು. ಕಲಾವಿದ ವಿವೇಕ್ ಅವರ ಸಾವು ಅಜಾಗರೂಕತೆಯಿಂದ ನಡೆದಿದೆ ಎಂದು ನಾಯಕ ನಟ ಅಜಯ್ ಆರೋಪಿಸಿದ ಹಿನ್ನಲೆಯಲ್ಲಿ ಫೈಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ರಾಜ್, ಕ್ರೇನ್ ಚಾಲನೆ ಮಾಡುತ್ತಿದ್ದ ಮಹದೇವ್ ಅವರನ್ನು ಬಂಧಿಸಿ ೧೪ ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು.

5. ಕೋಮಲ್ ವಿರುದ್ದ ಭ್ರಷ್ಟಾಚಾರ ಆರೋಪ : ನಟ ಕೋಮಲ್ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು ಡಿ.ಎಸ್.ಎಸ್ ಸಂಘಟನೆಯ ರಘು ಎಂಬುವವರ ನೆತೃತ್ವದಲ್ಲಿ ಬಿಬಿಎಂಪಿ ಎದುರು ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಶಾಲೆಗಳಿಗೆ ರಜೆ ಘೋಷಿಸಲಾಗಿದ್ದರೂ ಮಕ್ಕಳಿಗೆ ಸ್ವೆಟ್ಟರ್ ನೀಡುವುದಾಗಿ ಹೇಳಿ ಕೋಮಲ್ ಒಂದು ಕೋಟಿ ಬಿಲ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

6. ಕೋಟಿಗೊಬ್ಬ 3 ರಿಲೀಸ್‌ಗೆ ತಡ : ಕೋಟಿಗೊಬ್ಬ3 ಸಿನಿಮಾ ರಿಲೀಸ್ ಆಗುವ ಹೊತ್ತಿಗೆ ಸಣ್ಣ ಮಟ್ಟಿನಲ್ಲಿ ತೊಡಕಾಗಿದ್ದರಿಂದ ಚಿತ್ರ ಬಿಡುಗಡೆಯಾಗಬೇಕಾಗಿದ್ದ ದಿನದಂದು ಬಿಡುಗಡೆಯಾಗಲಿಲ್ಲ. ಅಕ್ಟೋಬರ್ ೧೪ರಂದು ಯುಎಫ್‌ಓ ಸರ್ಟಿಫಿಕೇಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಸಿನಿಮಾ ಅಂದು ಬಿಡುಗಡೆಯಾಗಿರಲಿಲ್ಲ. ಇದರಿಂದಾಗಿ ನಿರ್ದೇಶಕ ಸೂರಪ್ಪ ಬಾಬು ಕ್ಷಮೆಯನ್ನೂ ಕೇಳಿದ್ದರು. ಆದರೆ ಅಭಿಮಾನಿಗಳು ಥಿಯೇಟರ್‌ಗೆ ನುಗ್ಗಿ ಗಲಭೆ ಎಬ್ಬಿಸಿದ್ದರು. ಬಳಿಕ ಸುದೀಪ್ ಮಧ್ಯೆ ಪ್ರವೇಶಿಸಿ ಚಿತ್ರ ಬಿಡುಗಡೆಗೆ ಬೇರೆ ವಿತರಕರನ್ನು ಹುಡುಕಿ ಅಕ್ಟೋಬರ್ 14ರಂದು ಬಿಡುಗಡೆಗೊಳಿಸಿದರು.

7. ಏಕ್ ಲವ್ ಯಾ ಶಾಂಪೇನ್ ವಿವಾದ : ಏಕ್ ಲವ್ ಯಾ ಸಿನಿಮಾದ ಹಾಡಿನ ರಿಲೀಸ್ ಕಾರ್ಯಕ್ರಮವೊಂದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಚಿತ್ರದ ಹಾಡು ಎಣ್ಣೆಗೆ ಸಂಬಂಧಿಸಿದ್ದರಿಂದ  ಕಾರ್ಯಕ್ರಮಕ್ಕೆ ಬಂದಿದ್ದ ನಟಿಯರು ಶಾಂಪೇನ್ ಬಾಟಲ್ ಹಿಡಿದು ಪೋಸ್ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಹಿನ್ನಲೆಯಲ್ಲಿ ಪುನೀತ್ ಫೋಟೋ ಕೂಡ ಬರುತ್ತಿದ್ದುದರಿಂದ ಪುನೀತ್ ಫೋಟೋ ಎದುರು ನಟಿಯರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ವಿವಾದ ಎದ್ದಿತ್ತು.

8. ಹಂಸಲೇಖ ವಿವಾದ : ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಾದಬ್ರಹ್ಮ ಹಂಸಲೇಖ ವಿವಾದಕ್ಕೀಡಾಗಿದ್ದರು. ಈ ಘಟನೆ ವೈರಲ್ ಆಗುತ್ತಿದ್ದಂತೆ ಹಂಸಲೇಖ ಅವರು ಕ್ಷಮೆ ಕೋರಿದ್ದರಾದರೂ ಅನೇಕರು ವಿರೋಧಿಸುವುದನ್ನು ನಿಲ್ಲಿಸಿರಲಿಲ್ಲ. ಇದೇ ವೇಳೆ ಅಹಿಂದ ಸಂಘಟನೆಗಳು ಮತ್ತು ಹಂಸಲೇಖ ಅಭಿಮಾನಿಗಳು ಅವರ ಪರವಾಗಿ ನಿಂತರು. ವಿವಾದ ಭುಗಿಲೆದ್ದು ಬಳಿಕ ತಿಳಿಯಾಯಿತು. ಹೀಗೆ 2021ರಲ್ಲಿ ಅನೇಕ ವಿವಾದಗಳ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top