‘ಫ್ಯಾಮಿಲಿ ಪ್ಯಾಕ್’, ‘ಸಂಕಷ್ಟಕರ ಗಣಪತಿ’ ಖ್ಯಾತಿಯ ನಟ ಲಿಖಿತ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ನವ ನಿರ್ದೇಶಕ ಎನ್. ವಿನಾಯಕ ನಿರ್ದೇಶನದಲ್ಲಿ ಮೂಡಿಬರಲಿರುವ ರೊಮ್ಯಾಂಟಿಕ್- ಕಾಮಿಡಿ ಥೀಮ್ ಹೊಂದಿರುವ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇದೇ ಏಪ್ರಿಲ್ ಏಳರಂದು ನೆರವೇರಿದ್ದು, ಸ್ವತಃ ಲಿಖಿತಿ ಶೆಟ್ಟಿಯೇ ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ.
ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸ್ನೇಹಿತನೊಂದಿಗೆ ಸಹ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ. ‘ಸಂಕಷ್ಟ ಕರ ಗಣಪತಿ’ ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿ , ಓ ಟಿ ಟಿಯಲ್ಲಿ ಬಿಡುಗಡೆಯಾಗಿ ಜನ ಮನ್ನಣೆ ಗಳಿಸಿದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಲಿಖಿತ್ ಶೆಟ್ಟಿ, ಇದೀಗ ಕೆ ಎಮ್ ಚೈತನ್ಯ ನಿರ್ದೇಶನದ ‘ಅಬ್ಬಬ್ಬಾ’ ಸಿನೆಮಾದಲ್ಲಿ ನಟಿಸುತ್ತಿದ್ದು, ಅದು ಮೇ ಯಲ್ಲಿ ಬಿಡುಗಡೆಯಾಗಲು ಸಿದ್ದವಿದೆ. ಜೊತೆಗೆ ಕಿರಿಕ್ ಕೀರ್ತಿ ನಿರ್ದೇಶನದ ‘ಲವ್ ಮದುವೆ ಇತ್ಯಾದಿ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ.
ಎನ್ ವಿನಾಯಕ ಹೇಳಿದ ಕತೆಯನ್ನು ಬಹಳವಾಗಿ ಮೆಚ್ಚಿದ ಲಿಖಿತ್ ಶೆಟ್ಟಿ ನಟನೆಯ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದು, ಜುಲೈ ನಲ್ಲಿ ಶೂಟಿಂಗ್ ಆರಂಭಿಸುವ ಯೋಚನೆಯಲ್ಲಿದ್ದಾರೆ. ಇನ್ನೂ ಹೊಸ ನಿರ್ದೇಶಕ ಎನ್ ವಿನಾಯಕ ಹಲವಾರು ಕನ್ನಡ ಸಿನೆಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದು, ‘ಕೆ ಎ – ೧೬’. ‘ಆಫ್ಟರ್ ೮ ಪಿ ಎಮ್’, ‘ಲಾಸ್ಟ್ ಸೀನ್’ ಎಂಬ ಆಲ್ಬಮ್ ಸಾಂಗ್ ಗಳು ಮತ್ತು ‘ಮಿ. ಬೀಜ’ ಎಂಬ ಕಿರುಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
