fbpx
ಸಮಾಚಾರ

“ಪಟ್ಟಿ ಸಾಕಾ? ಇನ್ನೂ ಬೇಕಾ?” ಬಿಜೆಪಿಯ ಕುಟುಂಬ ರಾಜಕಾರಣ ಪಟ್ಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಭಾರತೀಯ ಜನತಾ ಪಕ್ಷ ಎಂದರೆ ಬುರುಡೆ ಪಾರ್ಟಿ. ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದವರು ಈಜುಕೊಳ ಮಾಡಿದ್ದಾರೆ. ಭವ್ಯ ಬೆಂಗಳೂರನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ಬಗ್ಗೆಯೂ ಕಿಡಿಕಾರಿದ್ದಾರೆ..

 

 

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ‘ಬಿಜೆಪಿ ಎಂಬ ಬುರುಡೆ ಪಾರ್ಟಿ’ ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ! ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆಗಳಾಗಿವೆ ಎಂದು ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಈ ತಿಂಗಳ 13ನೇ ತಾರೀಖು ಮುಗಿದ ಜಲಧಾರೆ ಸಮಾರೋಪ ಸಮಾವೇಶದ ಬಗ್ಗೆ ಆರು ದಿನ ಅಧ್ಯಯನ ಮಾಡಿ ಟ್ವೀಟ್ ಮಾಡಿದೆ ಬಿಜೆಪಿ. ಇನ್ನು ಆರಂಭವಾಗದ ಪಂಚರತ್ನ ಯಾತ್ರೆ ಬಗ್ಗೆ ಆಗಲೇ ಏರಿದೆ ಬೀಪಿ. ಮಿಷನ್ 123 ನಮ್ಮ ಗುರಿ. ನಿಮಗೆ ಯಾಕೆ ಉರಿ?

 

 

ಜೆಡಿಎಸ್ ನಲ್ಲಿ 1+2+3 ಸಂಖ್ಯಾಬಲ ಇದೆ, ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ. ಯಡಿಯೂರಪ್ಪ, ಶೆಟ್ಟರ್, ನಿರಾಣಿ, ಜಾರಕಿಹೊಳಿ, ಜೊಲ್ಲೆ; ಒಂದಾ.. ಎರಡಾ? ಪಟ್ಟಿ ಮಾಡುತ್ತಾ ಹೋದರೆ ಅದೇ ಹನುಮನ ಬಾಲ. ಈಗ ಬಿಜೆಪಿಗರು ಹೇಳಬೇಕು, 1+2 / 1+2+3 ಇರುವುದು ಎಲ್ಲಿ? ಈ ವಿಷಯದಲ್ಲಿ ಬಿಜೆಪಿಯದ್ದು ರಾಷ್ಟೀಯ ದಾಖಲೆ. ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಬ್ರಿಟಿಷರ ಬಚ್ಚಲು ಬಾಚಿದ ಅವರಿಗೆ ತಮ್ಮ ಕಪಟ ನೀತಿಗೆ ವಿರುದ್ಧವಾಗಿದ್ದ ರಾಷ್ಟ್ರೀಯವಾದ ಎಂಬ ಏಣಿ ಹತ್ತಿ ತಾನು ರಕ್ಕಸರೂಪ ತಾಳಿದ್ದು ಮರೆತಿದೆಯಾ? ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ & ಸನ್ಸ್, ಶೆಟ್ಟರ್ -ನಿರಾಣಿ & ಬ್ರದರ್ಸ್, ಜೊಲ್ಲೆ & ಹಸ್ಬೆಂಡ್, ಉದಾಸಿ & ಸನ್ಸ್, ಜಾರಕಿಹೊಳಿ & ಬ್ರದರ್ಸ್, ಲಿಂಬಾವಳಿ ಭಾವ ಬಾಮೈದ, ಅಂಗಡಿ & ಫ್ಯಾಮಿಲಿ, ಬಸವರಾಜು & ಸನ್, ಕತ್ತಿ & ಬ್ರದರ್ಸ್, ಅಪ್ಪಚ್ಚು ರಂಜನ್ & ಬ್ರದರ್. ಕೊನೆಗೆ, ಬಳ್ಳಾರಿಯ ರೆಡ್ಡಿ & ಬ್ರದರ್ಸ್, ಶ್ರೀರಾಮುಲು & ಸಿಸ್ಟರ್. ಪಟ್ಟಿ ಸಾಕಾ? ಇನ್ನೂ ಬೇಕಾ? ದಿಲ್ಲಿಯಿಂದ ಹಳ್ಳಿ ತನಕ ಕುಟುಂಬ ರಾಜಕಾರಣದ ಕೊಳದಲ್ಲಿ ಬಿಜೆಪಿ ಮಿಂದೇಳುತ್ತಿರುವುದು ಸುಳ್ಳಾ? ನನ್ನನ್ನು ಲಕ್ಕಿ ಡಿಪ್ ಸಿಎಂ ಎನ್ನುವ ಬಿಜೆಪಿಗೆ, ತನ್ನ ಸಿಎಂಗಳೆಲ್ಲರೂ ಆಪರೇಷನ್ ಕಮಲದ ಕೆಸರಿನಲ್ಲಿ ಡಿಪ್ ಆದವರು ಎನ್ನುವುದು ಗೊತ್ತಿಲ್ಲವೆ? ಎಂದು ಸರಣಿ ಟ್ವೀಟ್‌ ಮಾಡಿ ಬಿಜೆಪಿಯನ್ನು ಕೈಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top