fbpx
ಸಮಾಚಾರ

ರಾಷ್ಟ್ರಕವಿ ಮತ್ತು ನಾಡಗೀತೆಗೆ ಅಪಮಾನ: ಕುವೆಂಪು ಪ್ರತಿಷ್ಠಾನಕ್ಕೆ ಹಂಪನಾ ರಾಜೀನಾಮೆ!

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪರ- ವಿರೋಧಗಳ ಚರ್ಚೆ ನಡುವೆ ಪ್ರತಿಭಟನೆ ನಡೆಯುತ್ತಿದೆ. ಈ ಎಲ್ಲದರ ನಡುವೆ ಇಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಡಾ.ಹಂಪ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿರುವ, ಹಿರಿಯ ಸಾಹಿತಿ ಹಂಪನಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮೂಲಕ ರಾಜೀನಾಮೆ ಘೋಷಿಸಿದ್ದಾರೆ..

ಹಂಪನಾ ಅವರ ಪತ್ರದ ಸಾರಾಂಶ ಇಂತಿದೆ:
ತಮ್ಮ ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಸಪ್ರಾಣಿಸಿ ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ, ಕರ್ನಾಟಕಕ್ಕೂ ಮಹಾಕವಿ ಕುವೆಂಪುರವರು ಗೌರವ ತಂದರು. ಅವರು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಮೊದಲಿಗರು. ಇದನ್ನರಿತು ಸರ್ಕಾರ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ವನ್ನು ಪ್ರಾರಂಭಿಸಿತಲ್ಲದೆ, ಅತ್ಯುನ್ನತ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಆದರೆ ಇಂದು ಕುವೆಂಪುರವರನ್ನೂ, ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ರಾ‍ಷ್ಟ್ರಗೀತೆಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದು ಅಪಾಯಕಾರಿಯಾದ ಬೆಳವಣಿಗೆ. ಇದರಿಂದ ‘ಪುಣ್ಯಶ್ಲೋಕದ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರ್ಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಕಾಶಗಳಿವೆ’ ಎಂಬ ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ. ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ.

ರಾಷ್ಟ್ರಕವಿ ಕುವೆಂಪುರವರನ್ನೂ, ನಮ್ಮ ಪವಿತ್ರ ನಾಡಗೀತೆಯನ್ನೂ ಅಪಮಾನಿಸುತ್ತಿದ್ದರೂ ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ. ಸರ್ಕಾರ ಸ್ಥಾಪಿಸಿರುವ ಕುವೆಂಪು ಅಧ್ಯಕ್ಷ ಸ್ಥಾನಕ್ಕೂ ಸದಸ್ಯತ್ವಕ್ಕೂ ನನ್ನ ರಾಜೀನಾಮೆಯನ್ನು ಮಾನ್ಯ ಮುಖ್ಯಮಂತ್ರಿಗಳು ಅಂಗೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top