ಬಲಪಂಥೀಯ ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಲಾಗಿದೆ ಹಾಗೂ ಕರ್ನಾಟಕದ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ಕೂಡ ನೀಡಲಾಗಿದೆ.
ಇನ್ನು ಈ ವಿಚಾರದ ಬಗ್ಗೆ ಆದಿಚುಂಚನಗಿರಿ ಸ್ವಾಮಿ ನಿರ್ಮಲಾನಂದ ಸ್ವಾಮೀಜಿ ಕೂಡ ಪ್ರತಿಕ್ರಿಯಿಸಿ ಕುವೆಂಪು ಅವರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.. ಕುವೆಂಪು ಅವರನ್ನು ನಿಂದಿಸಿ, ಲೇಖನ ಬರೆದಿರುವುದು ಸರಿಯಲ್ಲ. ಇಂಥವರ ಮೇಲೆ ಸೈಬರ್ ಕ್ರೈಮ್ ಅಡಿಯಲ್ಲಿ ಕ್ರಮ ಜರುಗಿಸಿ ಎಂದು ಸರ್ಕಾರವನ್ನು ಆಗ್ರಹ ಮಾಡಿದ್ದರು ಇಷ್ಟೆಲ್ಲಾ ವಿರೋಧದ ನಡುವೆಯೂ ಪಟ್ಟು ಬಿಡದ ಸರ್ಕಾರ ಪರಿಷ್ಕೃತಗೊಂಡಿರುವ ಪಠ್ಯಪುಸ್ತಕಗಳನ್ನೇ ಕಡ್ಡಾಯವಾಗಿ ಶಾಲೆಗಳಿಗೆ ವಿತರಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘ ಸುತ್ತೋಲೆ ಹೊರಡಿಸಿದೆ.
“ಹಳೆಯ ಪಠ್ಯಪುಸ್ತಕಗಳನ್ನು ವಿತರಿಸಬಾರದು. 2022–23ನೇ ಸಾಲಿಗೆ ಹೊಸದಾಗಿ ಮುದ್ರಣಗೊಂಡು ಸರಬರಾಜಾಗುತ್ತಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನೇ ಕಡ್ಡಾಯವಾಗಿ ಶಾಲೆಗಳಿಗೆ ವಿತರಿಸಬೇಕು. ಒಂದು ವೇಳೆ, ಹಳೆಯ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಈಗಾಗಲೇ ಸರಬರಾಜು ಮಾಡಿದ್ದರೆ ತಕ್ಷಣವೇ ಅವುಗಳನ್ನು ವಾಪಸ್ ಪಡೆದುಕೊಳ್ಳಬೇಕು.’’ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.
‘‘ ಈ ವಿಷಯದಲ್ಲಿ ವ್ಯತ್ಯಾಸಗಳಾದಲ್ಲಿ ಬ್ಲಾಕ್ ಹಂತದ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಂತದ ಪಠ್ಯ ಪುಸ್ತಕ ನೋಡಲ್ ಅಧಿಕಾರಿಗಳು ಹಾಗೂ ಉಪನಿರ್ದೇಶಕರು ಸಂಪೂರ್ಣ ಜವಾಬ್ದಾರಿಯಾಗಿರುತ್ತಾರೆ. ತಪ್ಪುಗಳಾದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಸುತ್ತೋಲೆಯಲ್ಲಿ
ಉಲ್ಲೇಖಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
