ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದೇಶದ ವಿವಿಧ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.
“ಜಗಳವನ್ನು ಏಕೆ ಹೆಚ್ಚಿಸಬೇಕು? ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಎಂದು ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಕೇಳಿದರು.
‘ಈಗ ಜ್ಞಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ಇತಿಹಾಸವನ್ನು ಯಾವತ್ತು ಬದಲಾಯಿಸಲು ಸಾಧ್ಯವಿಲ್ಲ, ಆ ಇತಿಹಾಸವನ್ನು ನಾವು ಮಾಡಿಲ್ಲ, ಅದನ್ನು ಇಂದಿನ ಹಿಂದುಗಳಾಗಲಿ ಅಥವಾ ಮುಸ್ಲಿಮರು ಕೂಡ ಮಾಡಿಲ್ಲ. ಇದು ಇಸ್ಲಾಂ ಧರ್ಮವು ಭಾರತಕ್ಕೆ ಬಂದಂತಹ ಸಂದರ್ಭದಲ್ಲಿ ನಡೆದದ್ದು.ಆಗ ಆಕ್ರಮಣಕಾರರು, ದಾಳಿಯ ಸಮಯದಲ್ಲಿ, ಸ್ವಾತಂತ್ರ್ಯವನ್ನು ಬಯಸುವ ಜನರ ಸ್ಥೈರ್ಯವನ್ನು ದುರ್ಬಲಗೊಳಿಸಲು ದೇವಾಲಯಗಳನ್ನು ನಾಶಪಡಿಸಿದರು, ಅಂತಹ ಸಾವಿರಾರು ದೇವಾಲಯಗಳಿವೆ, “ಎಂದು ಅವರು ಹೇಳಿದರು.
ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿಲ್ಲ. ಭಾರತದ ಮೇಲೆ ಇಸ್ಲಾಂ ರಾಜರು ದಂಡಯಾತ್ರೆ ಕೈಗೊಂಡಾಗ ಜ್ಞಾನವಾಪಿಯಂತಹ ಘಟನೆಗಳು ನಡೆದಿವೆ. ನೂರಾರು ದೇವಸ್ಥಾನಗಳು ನಾಶವಾಗಿವೆ. ಹೀಗಾಗಿ ದಿನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು? ಎಲ್ಲ ಮಸೀದಿಗಳಲ್ಲೂ ಯಾಕೆ ಶಿವಲಿಂಗವನ್ನು ಹುಡುಕಬೇಕು ಎಂದು ಪ್ರಶ್ನಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
