ಕನ್ನಡ ಸಿನಿಮಾ ರಂಗದ ದಿಗ್ಗಜ ಹಾಸ್ಯನಟ ನರಸಿಂಹರಾಜು ಅವರ ಹಿರಿಯ ಪುತ್ರಿ ಧರ್ಮವತಿ ಅವರು ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಧರ್ಮವತಿ ನಿಧನರಾಗಿದ್ದಾರೆ. ಇಂದು ಮುಂಜಾನೆ 5.30ಕ್ಕೆ ಧರ್ಮವತಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಧರ್ಮವತಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಧರ್ಮವತಿ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ 3.30ರ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಧರ್ಮವತಿಗೆ ಮೂವರು ಮಕ್ಕಳದ್ದು, ಪುತ್ರ ಅರವಿಂದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಮತ್ತು ಸಂಗೀತ ಸಂಯೋಜನೆ ಕೂಡ ಮಾಡುತ್ತಿದ್ದಾರೆ. ಕಿರಿಯ ಪುತ್ರ ಅವಿನಾಶ್ ನರಸಿಂಹರಾಜು ನಟನಾಗಿ ಗುರುತಿಸಿಕೊಂಡಿದ್ದಾರೆ. ಲಾಸ್ಟ್ ಬಸ್ ಸೇರಿದಂತೆ ಹಲವು ಚಿತ್ರಗಳನ್ನು ಇವರು ಮಾಡಿದ್ದಾರೆ.
ನರಸಿಂಹ ರಾಜು ಎರಡನೇ ಪುತ್ರಿ, ಧರ್ಮವತಿ ಅವರ ಸಹೋದರಿ ಸುಧಾ ನರಸಿಂಹ ರಾಜು ಅವರು ನಟಿಯಾಗಿ ಖ್ಯಾತಿಗಳಿಸಿದ್ದಾರೆ. ಸುಧ ಅವರು ಈಗಾಗಲೇ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಸುಧಾ ನರಸಿಂಹರಾಜು ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ನಾಯಕಿಯ ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಧರ್ಮವತಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು, ಆಪ್ತರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಧರ್ಮವತಿ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಕನ್ನಡ ಚಿತ್ರರಂಗಕ್ಕೆ ನಟ ನರಸಿಂಹ ರಾಜು ಕೊಡುಗೆ ಅಪಾರ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ನರಸಿಂಹ ರಾಜು ಅದ್ಭುತ ಪಾತ್ರಗಳ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿದ್ದರು. ಸದ್ಯ ಅವರ ಕುಟುಂಬದ ಕೆಲವು ಸದಸ್ಯರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
