fbpx
ಸಮಾಚಾರ

ವೈಷ್ಣವರು ಮತ್ತು ಜೈನರ ಮದ್ಯೆ ನಡೆದ ಸಂಧಾನದ ಐತಿಹಾಸಿಕ ಶಾಸನ ಮಾಗಡಿಯಲ್ಲಿ ಪತ್ತೆ: ಶಾಸನದಲ್ಲಿರುವ ನಿಗೂಢ ಸತ್ಯ ತಿಳಿಯಲು ಮುಂದೆ ಓದಿ

ಮಾಗಡಿ ತಾಲ್ಲೂಕಿನ ಕಲ್ಯ ಗ್ರಾಮವು ಪುರಾತನ ಕಾಲದಿಂದಲೂ ಪ್ರಸಿದ್ಧ ಕೇಂದ್ರವಾಗಿದ್ದು, ತನ್ನೊಡಲಲ್ಲಿ ಇಪ್ಪತ್ತಕ್ಕು ಹೆಚ್ಚು ಶಾಸನಗಳು, ಸ್ಮಾರಕಗಳು ಇನ್ನಿತರ ಹಲವಾರು ಅಂಶಗಳಿಂದ ತನ್ನದೇ ಆದ ಐತಿಹಾಸಿಕ ಮಾನ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಕಲ್ಯದಲ್ಲಿ ವೈಷ್ಣವರು ಮತ್ತು ಜೈನರ ನಡುವೆ ಧಾರ್ಮಿಕ ಸಂಘರ್ಷ ನಡೆದಾಗ ವಿಜಯನಗರದ ಅರಸ ಬುಕ್ಕರಾಯನು ಇವರಿಬ್ಬರ ನಡುವಿನ ಕಲಹವನ್ನು ಪರಿಹರಿಸಿ ಧಾರ್ಮಿಕ ಸಮನ್ವಯತೆಯನ್ನು ಸಾರುವ ಶಾಸನವನ್ನು ಇಲ್ಲಿ ಹಾಕಿಸಿರುವುದು ಒಂದು ಪ್ರಮುಖ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಕಲ್ಯದ ಬುಕ್ಕರಾಯನ ಧರ್ಮ ಸಮನ್ವಯತೆಯ ಶಾಸನ ಹಾಗೂ ಇನ್ನಿತರ ಐತಿಹಾಸಿಕ ಅಂಶಗಳಿಗೆ ಸಂಬಂಧಿಸಿದಂತೆ ದಿ ಮಿಥಿಕ್‌ ಸೊಸೈಟಿಯು ಸಾಕಷ್ಟು ಪೊಸ್ಟ್ ಗಳನ್ನು ಇದುವರೆಗೂ ಹಂಚಿಕೊಂಡಿದ್ದು, ಈ ಪೋಸ್ಟ್‌ ಮೂಲಕ ಒಂದು ವಿಶೇಷವಾದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

 

 

ಶಾಸನಗಳೆಂದರೆ ಸಾಕಷ್ಟು ಜನರಲ್ಲಿ ನಿರಾಸಕ್ತಿ, ಕೇವಲ ಅದೊಂದು ಲಿಪಿಯಿರುವ ಕಲ್ಲು ಎಂಬ ಭಾವನೆ ಇರುತ್ತದೆ. ಜೊತೆಗೆ ಅವುಗಳ ಭೌತಿಕ ಸಂಕ್ಷಣೆಯ ಬಗ್ಗೆ ತಲೆಕೆಡಿಸಿಕೊಳ್ಳದಿರುವುದನ್ನು ನೋಡಿರುತ್ತೇವೆ. ಇಂತಹ ಪರಿಸ್ಥಿತಿಯೊಳಗೆ ಮಾಗಡಿ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವ ಶ್ರೀ ಪ್ರದೀಪ್‌ ಅವರು, ಸರ್ಕಾರಿ ಅಧಿಕಾರಿಯಾಗಿದ್ದು, ಇತಿಹಾಸಕ್ತರಾಗಿ ಪರಂಪರೆ ರಕ್ಷಣೆಗಾಗಿ ತಮ್ಮ ಸ್ವಂತ ಹಣದಿಂದ ಹಾಗೂ ತಮ್ಮ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಕಲ್ಯ ಗ್ರಾಮದಲ್ಲಿನ ಬುಕ್ಕರಾಯನ ಧರ್ಮ ಸಮನ್ವಯತೆಯ ಶಾಸನ, ಸರ್ಕಾರಿ ಶಾಲೆ ಆವರಣದಲ್ಲಿ ಬಿದ್ದಿರುವಂತ 14ನೇ ಶತಮಾನದ ಶಾಸನ ಮತ್ತು ನಿಷದಿ ಕಲ್ಲು, ಹುಲಿಬೇಟೆ ವೀರಗಲ್ಲುಗಳನ್ನು ಭೌತಿಕ ಸಂರಕ್ಷಣೆ ಮಾಡಿಸುವುದರ ಜೊತೆಗೆ ಮಾಹಿತಿ ಫಲಕವನ್ನು ಅಳವಡಿಸುತ್ತಿರುವುದು, ಇದೊಂದು ಸರ್ಕಾರಿ ಅಧಿಕಾರಿ ಮಾಡಿರುವ ಶ್ಲಾಘನೀಯ ಹಾಗೂ ಮಾದರಿಯ ಕೆಲಸವಾಗಿದ್ದು, ಇದೇ ರೀತಿ ಬೇರೆ ಬೇರೆ ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯರು ತಮ್ಮ ಇತಿ-ಮಿತಿಯೊಳಗೆ ನಮ್ಮ ಪರಂಪರೆಯ ಭಾಗವಾಗಿರುವ ಶಾಸನಗಳು ಹಾಗೂ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾದರೆ ನಮ್ಮ ಅಮೂಲ್ಯ ಪರಂಪರೆಯ ಉದಾತ್ತ ಅಂಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಪ್ರಸ್ತುತ ಕಲ್ಯದಲ್ಲಿ ಸಂರಕ್ಷಣೆಯಾಗಿರುವ ಶಾಸನವು ಕಡಿಮೆ ಎಂದರೂ ಸಾವಿರ ವರ್ಷ ಸುಸ್ಥಿತಿಯಲ್ಲಿರುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

 

 

ಇಂತಹ ಐತಿಹಾಸಿಕ ಸ್ಮಾರಕಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾಗಡಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ಪ್ರದೀಪ್ .ಟಿ ಅವರಿಗೆ, ಕಲ್ಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಬೆಟ್ಟಸ್ವಾಮಿಗೌಡ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೆ ಮುಖ್ಯವಾಗಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದರೂ ಶಾಸನಕ್ಕೆ ಯಾವುದೇ ರೀತಿ ಧಕ್ಕೆ ಮಾಡದೇ ಸಂರಕ್ಷಿಸಿಕೊಂಡು ಬಂದಿರುವ ಜಮೀನಿನ ಮಾಲೀಕರಾದ ಶಿವಲಿಂಗಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಇಂದು ಕಲ್ಯದ ಈ ಶಾಸನದ ಸಂರಕ್ಷಣಾ ಕಾಮಗಾರಿಯನ್ನು ಉದ್ಘಾಟಿಸಲು ರಾಮನಗರದ ಜಿಲ್ಲಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದಿಗ್ವಿಜಯ್ ಬೋಡ್ಕೆ, ರಾಮನಗರದ ಪೋಲೀಸ್ ಅಧೀಕ್ಷಕರಾದ ಕೆ.ಸಂತೋಷ್ ಬಾಬು ಹಾಗೂ ರಾಮನಗರದಿಂದ ಇತ್ತೀಚೆಗೆ ವರ್ಗಾವಣೆಯಾದ (CEO) ಮೊಹಮ್ಮದ್ ಇಕ್ರಾಮುಲ್ಲ ಅಕ್ರಮ್ ಅವರು ಆಗಮಿಸಿದ್ದರು.

 

 

ಕಲ್ಯಾದ ಸಾ.ಶ.1368ರ ಬುಕ್ಕರಾಯನ ಧರ್ಮ ಸಮನ್ವಯತೆಯ ಶಾಸನದ ಸಾರಾಂಶ:
ಕಲ್ಯ ಗ್ರಾಮವು ಪುರಾತನ ಕಾಲದಿಂದಲೂ ಪ್ರಸಿದ್ಧವಾದ ಐತಿಹಾಸಿಕ ಕೇಂದ್ರವಾಗಿದ್ದು, ಈ ಊರನ್ನು ಶಾಸನಗಳಲ್ಲಿ ಕಲೆಯ, ಕಳ್ಳಹ, ಕಲ್ಲೇಹ, ಕಲ್ಯಹ ಎಂಬ ಹೆಸರುಗಳಿಂದ ಕರೆಯಲಾಗಿದೆ. ಇಲ್ಲಿ ಸುಮಾರು20ಕ್ಕೂ ಹೆಚ್ಚುಶಾಸನಗಳು (8 ರಿಂದ16ನೇ ಶತಮಾನದವರೆಗೆ),ಹುಲಿಬೇಟೆವೀರಗಲ್ಲುಗಳು,ವೀರ ಮಾಸ್ತಿಕಲ್ಲುಗಳು, ನಿಶದಿ ಕಲ್ಕುಲಿಂಗಮುದ್ರೆ ಗಡಿಕಲ್ಲು ದೇವಾಲಯಗಳು, ಜಂಗಮ ಮಠ,ಮಾನಸ್ತಂಭ ಮುಂತಾದ ಶೈವ, ವೈಷ್ಣವ ಮತ್ತು ಜೈನ ಧರ್ಮಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ಕಂಡುಬರುತ್ತವೆ. ಬಹುಭಾಷಾ ಪಂಡಿತ, ಕವಿ ಮತ್ತು ಬಸವಣ್ಣನವರ ವಿಚಾರಧಾರೆಗಳಿಂದ ಪ್ರಭಾವಿತನಾಗಿ ಬಸವಪುರಾಣ ಎಂಬ ಕಾವ್ಯವನ್ನು ರಚಿಸಿದ ಪಾಲ್ಕುರಿಕೆ ಸೋಮನಾಥನು ಇದೇ ಕಲ್ಯ ಗ್ರಾಮದಲ್ಲಿ ವಾಸವಿದ್ದು, ಇಲ್ಲಿಯೇ ಐಕ್ಯನಾಗಿರುವುದು ಮತ್ತೊಂದು ವಿಶೇಷ ಇಷ್ಟು ಮಾತ್ರವಲ್ಲದೇ ಇದು ಶಿಲಾಯುಗದನೆಲೆಯೂ ಆಗಿತ್ತು ಎಂಬುದು ವಿವಿಧ ಆಧಾರಗಳಿಂದ ತಿಳಿದುಬರುತ್ತದೆ. ಆದರೆ ಪೂರ್ವ ಇತಿಹಾಸದ ಕಾರಣಕ್ಕಿಂತಲೂ ಮಿಗಿಲಾಗಿ ಒಂದು ಐತಿಹಾಸಿಕ ಘಟನೆಯ ಕಾರ್ಯಕಾರಣ ಸಂಬಂಧದಿಂದಾಗಿ ಈ ಕಲ್ಯ ಗ್ರಾಮವು ಪ್ರಸಿದ್ಧವಾಗಿದೆ ಆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿ ನಿಂತಿರುವುದೇ ಈ ಶಾಸನ ಕಲ್ಲು

ಕಲ್ಯದಲ್ಲಿ ಶ್ರೀ ವೈಷ್ಣವರು ಜೈನರನ್ನು ಅನ್ಯಾಯವಾಗಿ ಕೊಂದರು ಎಂದು, ವಿಜಯನಗರದ ಅರಸನಾದ ಬುಕ್ಕರಾಯನ ಬಳಿ ತಮಗಾದ ಅನ್ಯಾಯವನ್ನು ಜೈನರು ಹೇಳಿಕೊಳ್ಳುತ್ತಾರೆ.ಆಗಬುಕ್ಕರಾಯನು ಎರಡೂ ಧರ್ಮದ ಮುಖಂಡರನ್ನು ಕರೆಯಿಸಿ ಇವರಿಬ್ಬರ ನಡುವಿನ ವ್ಯಾಜ್ಯವನ್ನು ಪರಿಹರಿಸಿಧಾರ್ಮಿಕಸಮನ್ವಯತೆಯನ್ನು ಸಾರುವ ತೀರ್ಪನ್ನು ನೀಡಿರುವುದೇ ಈ ಶಾಸನದ ವಿಶೇಷ ಈ ಶಾಸನವನ್ನು 16 ಆಗಸ್ಟ್-1368ರಲ್ಲಿ ಹಾಕಿಸಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಶಾಸನ ಶ್ರವಣಬೆಳಗೊಳದಲ್ಲಿಯೂ ಇದೆ. ಆದರೆ ಶ್ರವಣಬೆಳಗೊಳದ ಶಾಸನವನ್ನು ಕಲ್ಯದ ಶಾಸನವನ್ನು ಹಾಕಿಸಿದ ಐದು ವಾರಗಳ ತರುವಾಯ ಹಾಕಿಸಲಾಗಿದ್ದು, ಕಲ್ಯ ಶಾಸನಕ್ಕೂ ಶ್ರವಣಬೆಳಗೊಳದ ಶಾಸನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಕಲ್ಯದ ಶಾಸನವನ್ನು 1905ರಲ್ಲಿ (ಎಪಿಗ್ರಾಫಿಯ ಕರ್ನಾಟಕ, ಸಂಪುಟ – 09, ಮಾಗಡಿ ತಾಲ್ಲೂಕು, ಶಾಸನ ಸಂಖ್ಯೆ-18) ಮತ್ತು ಶ್ರವಣಬೆಳಗೊಳದ ಶಾಸನವನ್ನು1973ರಲ್ಲಿ (ಎಪಿಗ್ರಾಫಿಯ ಕರ್ನಾಟಕ,ಸಂಪುಟ-02, ಶಾಸನ ಸಂಖ್ಯೆ 475) ದಾಖಲಿಸಲಾಗಿದೆ. ಆದರೆ ಈ ಕೆಳಗೆ ಕೊಟ್ಟಿರುವ ಸಾರಾಂಶವು ಕಲ್ಯ ಶಾಸನದಲ್ಲಿ ಬಂದಿರುವ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು ಇದನ್ನು ದಿ ಮಿಥಿಕ್ ಸೊಸೈಟಿಯ ಶಾಸನಗಳ 3D ಡಿಜಿಟಲ್ ಸಂರಕ್ಷಣಾ ತಂಡವು 30 ಸ್ಕ್ಯಾನಿಂಗ್ ಮಾಡಿದ ಡಿಜಿಟಲ್ ಚಿತ್ರಗಳ ಸಹಾಯದಿಂದ ಪರಿಷ್ಕರಿಸಿ ನೀಡಲಾಗಿದೆ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡವಾ ಮುಖಾಗಿ ಶ್ರೀರಂಗ ರಾಜ ಚರಣಾಂಬುಜ ಮೂಲದಾಸಃ ಶ್ರೀ ವಿಷ್ಣುಲೋಕ ಮಣಿಮಂಟಪ ಮಾರ್ಗದಾಯಿರಾಮಾನುಜೋ ವಿಜಯತೆಯತಿರಾಜರಾಜ ಎಂದು ರಾಮಾನುಜಚಾರ್ಯರನ್ನು ಸ್ತುತಿಸುವ ಶ್ಲೋಕದೊಂದಿಗೆ ಈ ಶಾಸನ ಪ್ರಾರಂಭವಾಗುತ್ತದೆ. ಈ ಶ್ಲೋಕವನ್ನು ಧಾಟೀ ಪಂಚಕಂ ದಿಂದ ತೆಗೆದುಕೊಳ್ಳಲಾಗಿದ್ದು, ಈ ಕೃತಿಯು ರಾಮಾನುಜಚಾರ್ಯರ ಧಾರ್ಮಿಕ ವಿಜಯಗಳು ಹಾಗೂ ತತ್ವಗಳನ್ನು ತಿಳಿಸುತ್ತದೆ. ಪಾಷಂಡರೆಂಬ ಸಮುದ್ರಕ್ಕೆ ವಡಬಾಗ್ನಿಯಂತಿರುವ, ಶ್ರೀರಂಗನಾಥನ ಪಾದಕಮಲಗಳ ದಾಸನಾದ, ವಿಷ್ಣುಲೋಕ ಮಣಿಮಂಟಪಕ್ಕೆ ಮಾರ್ಗ ತೋರಿಸುವಂತಹ ಯತಿರಾಜ ರಾಜನಾದ ರಾಮಾನುಜರಿಗೆ ಜಯವಾಗಲಿ ಎಂಬುದು ಈ ಶ್ಲೋಕದ ಅರ್ಥ ಮುಖ್ಯವಾಗಿ ಈ ಶ್ಲೋಕದ ಪ್ರಾರಂಭದಲ್ಲಿ ಬಂದಿರುವ ಪಾಷಂಡರು ಎಂಬ ಪದವು ನಾಸ್ತಿಕರೆಂಬ ಒಂದು ವರ್ಗವನ್ನು ಸೂಚಿಸುತ್ತಿದ್ದು, ಇವರು ವ್ಯಾಪಕವಾಗಿ ಅಂದಿನ ಸಮಾಜದಲ್ಲಿ ಹರಡಿದ್ದರು ಹಾಗೂ ಇವರಿಗೆ ವೇದಗಳು ಮತ್ತು ಇವುಗಳ ವಿಶ್ವಾಸಾರ್ಹತೆಗಳ ಮೇಲೆ ನಂಬಿಕೆ ಇರಲಿಲ್ಲ. ಇಂತಹ ಪಾಷಂಡರೆಂಬ ನಾಸ್ತಿಕರನ್ನು ರಾಮಾನುಜಚಾರ್ಯರು ತಮ್ಮ ಆಧ್ಯಾತ್ಮಮತ್ತು ಆಸ್ತಿಕವಾದ ಎಂಬ ಕಾಳಿಚ್ಚಿನಂತ ವಿಚಾರಧಾರೆಯ ಮೂಲಕ ಪರಿವರ್ತಿಸಿದರು ಎಂಬರ್ಥವನ್ನು ಇದು ನೀಡುತ್ತದೆ. ನಂತರ ಈ ಶಾಸನವು ಶಕ ವರ್ಷ ೧೨೯೦ನೆಯ ಕೀಲಕ ಸಂವತ್ಸರದ ಶ್ರಾವಣ ಶು ೨ ಸೋ ಶು-ಶುಕ್ಲಪಕ್ಷ, ಸೋ-ಸೋಮವಾರ) ಎಂಬ ಭಾರತೀಯ ಕಾಲಮಾನವನ್ನು ತಿಳಿಸಿದ್ದು, ಈ ಕಾಲಮಾನವನ್ನು ಇಂದಿನ ಕ್ಯಾಲೆಂಡರ್ ಗೆ ಹೋಲಿಸಿದಾಗ 16-ಆಗಸ್ಟ್-1368ಕ್ಕೆ ಹೊಂದಿಕೆಯಾಗುತ್ತದೆ.

ಈ ಶಾಸನವನ್ನು ಹಾಕಿಸಿದ ಕಾಲಘಟ್ಟದಲ್ಲಿ ಕರ್ನಾಟಕ ಸಾಮ್ರಾಜ್ಯದ (ವಿಜಯನಗರ) ಅರಸ ಬುಕ್ಕರಾಯನು ಆಳ್ವಿಕೆ ಮಾಡುತ್ತಿದ್ದು, ಜೈನರು ಮತ್ತು ಭಕ್ತರ (ಶ್ರೀ ವೈಷ್ಣವರು) ನಡುವೆ ವಾದ ವಿವಾದಗಳಾಗಿ ಆನೆಗೊಂದಿ, ಹೊಸಪಟ್ಟಣ, ಪೆನುಗೊಂಡೆ ಮತ್ತು ಕಳ್ಳಹವನ್ನು (ಇಂದಿನ ಕಲ್ಯ) ಒಳಗೊಂಡ ಸಮಸ್ತ ನಾಡಿನ ಜೈನರು ಬುಕ್ಕರಾಯನಿಗೆ, ಭಕ್ತರು (ಶ್ರೀ ವೈಷ್ಣವರು) ಜೈನರನ್ನು ಅನ್ಯಾಯವಾಗಿ ಕೊಲ್ಲುತ್ತಿರುವುದನ್ನು ವಿನಂತಿಸಿ ತಿಳಿಸುತ್ತಾರೆ. ಆಗ ಬುಕ್ಕರಾಯನು ಕೋವಿಲ್ (ಶ್ರೀರಂಗಂ), ತಿರುಮಲೆ (ಆಂದ್ರಪ್ರದೇಶದ ತಿರುಪತಿ), ಪೆರುಮಾ ಕೋವಿಲ್ (ಕಾಂಚಿಪುರಂ) ತಿರುನಾರಾಯಣಪುರದ (ಮೇಲುಕೋಟೆ) ಸಕಲ ಆಚಾರ್ಯರು, ಸಕಲ ಸಮಯಿಗಳು (ಒಂದು ಮತ ಅಥವಾ ಸಿದ್ಧಾಂತಕ್ಕೆ ಸೇರಿದವರು ಪ್ರಸ್ತುತ ಶಾಸನಕ್ಕೆ ಸಂಬಂಧಿಸಿದಂತೆ ಶ್ರೀವೈಷ್ಣವ ಪರಂಪರೆಯವರು), ಸಕಲ ಸಾತ್ವಿಕರು (ಒಳ್ಳೆಯ ಗುಣವನ್ನು ಹೊಂದಿರುವವರು, ಮೋಷಿಕರು (ದಾನವಾಗಿ ಪಡೆದ ಮುಷ್ಟಿ ಧಾನ್ಯದಿಂದ ಜೀವನ ನಡೆಸುವವರು), ತಿರುಪಣಿ (ದೇವಾಲಯದ ಕೆಲಸ ನೋಡಿಕೊಳ್ಳುವವರು), ತಿರುವಿಡಿ ತಂಣಿರವರು,ನಲವತ್ತೆಂಟು ತಲೆಮಕ್ಕಳು ಸಾವಂತಬೋವಕ್ಕಳು ತಿರುಕುಲ ಜಾಂಬವಕುಲಕ್ಕೆ ಸೇರಿದ 18 ನಾಡಿನ (ನಾಡುಗಳು) ವೈಷ್ಣವರ ಕೈಯಲ್ಲಿ ಜೈನರ ಕೈಯನ್ನು ಹಿಡಿಸಿ,ಜೈನರು ನಿಮ್ಮವೈಷ್ಣವರ ದರ್ಶನದ ಮೊರೆಹೊಕ್ಕುವರು, ಮತ್ತು ಪಂಚ ಬಸದಿಗಳಲ್ಲಿ ಕಳಸ ಜಗಳ, ಜಗಟೆ ಮೊದಲಾದ ಪಂಚ ಮಹಾ ವಾದ್ಯಗಳನ್ನು ನುಡಿಸಬಹುದು, ಪುನಃ ಭೇದ ಭಾವ ಬರಕೂಡದು, ಹಾಗೂ ರಾಜ್ಯದೊಳಗಿರುವ ಎಲ್ಲಾ ಬಸದಿಗಳಲ್ಲಿ ಶ್ರೀವೈಷ್ಣವರು ಶಾಸನವನ್ನು ನೆಟ್ಟು ಕೊಡುವರು ಎಂದು ತೀರ್ಮಾನವಾಗುತ್ತದೆ.

ಈ ಅಂಶಗಳಿಂದ ತಿಳಿಯುವುದೇನೆಂದರೆ ಜೈನರು ಶ್ರೀ ವೈಷ್ಣವರಿಂದ ಆಕ್ರಮಣಕ್ಕೆ ಒಳಗಾಗಿ ಆತಂಕದಲ್ಲಿದ್ದರು. ಆಗ ರಾಜನಾದ ಬುಕ್ಕರಾಯನು ಜೈನರ ಮನವಿಯನ್ನು ಪುರಸ್ಕರಿಸಿ, ಎರಡೂ ಧರ್ಮದ ಮುಖಂಡರನ್ನು ಕರೆಯಿಸಿ, ಅವರ ವ್ಯಾಜ್ಯವನ್ನು ಪರಿಹರಿಸಿ ತನ್ನ ಸಾಮ್ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಕಾರ್ಯವನ್ನು ಮಾಡಿದ್ದಾನೆ ಎಂಬುದು ತಿಳಿಯುತ್ತದೆ. ಜೊತೆಗೆ ಈ ಶಾಸನದಲ್ಲಿ ಪಂಚ ಬಸದಿಗಳು ಎಂಬ ಪದಗಳನ್ನು ಉಲ್ಲೇಖಿಸಿರುವುದನ್ನು ಗಮನಿಸಿದಾಗ,ಕಲ್ಯದಲ್ಲಿ ಐದು ಬಸದಿಗಳಿದ್ದವು ಎಂಬುದು ಖಚಿತವಾಗುತ್ತದೆ, ಆದರೆ ಕಲ್ಯದಲ್ಲಿ ಪ್ರಸ್ತುತ ಜೈನರ ಕುರುಹಾಗಿ ಒಂದು ಬೃಹತ್ ಮಾನಸ್ತಂಭ ಮತ್ತು ನಿಶದಿ ಕಲ್ಲು ಮಾತ್ರ ಕಂಡು ಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top