ರಾಕಿಂಗ್ ಸ್ಟಾರ್ ಯಶ್ ಅವರ ಸಾರಥ್ಯದಲ್ಲಿನ ಯಶೋಮಾರ್ಗ ಫೌಂಡೇಶನ್ ಇಲ್ಲಿಯವರೆಗೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಸಾಗರ ತಾಲೂಕಿನ ಆನಂದಪುರ ಸಮೀಪದ ಚಂಪಕ ಸರಸ್ಸು ಮಹಾಂತಿನ ಮಠದ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಲಾಗಿದ್ದು ಸದ್ಯ ಲೋಕಾರ್ಪಣೆಗೊಂಡಿದೆ.
ಮಹಂತಿನ ಮಠ ಅಥವಾ ಚಂಪಕ ಸರಸಿ ಎಂದು ಕರೆಯಲ್ಪಡುವ ಈ ಸ್ಥಳ ಕೆಳದಿಯ ಅರಸ ರಾಜ ವೆಂಕಟಪ್ಪ ನಾಯಕ ಕಟ್ಟಿಸಿದ್ದರು. ಈ ಕಲ್ಯಾಣಿಯನ್ನು ಮೂಲಗಳ ಪ್ರಕಾರ 14 ಮತ್ತು 15ನೇ ಶತಮಾನದಲ್ಲಿ ಕಟ್ಟಿಸಿದ್ದಾರೆ. ಇನ್ನು ಕೆಳದಿ ಅರಸರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಕೆರೆ ಮತ್ತು ಕಲ್ಯಾಣಿಯನ್ನು ಕಟ್ಟಿಸಿದ್ದಾರೆ. ಈ ಚಂಪಕ ಸರಸಿ ಕೂಡ ಆನಂದಪುರದ ಮಲಂದೂರು ಗ್ರಾಮದಲ್ಲಿದ್ದು, ಸದ್ಯ ಜೀರ್ಣೋದ್ಧಾರವಾಗಿದೆ.
ಇನ್ನು 76.8 ಅಗಲ ಹಾಗೂ 77.8 ಉದ್ದ ಇರುವ ಈ ಕಲ್ಯಾಣಿಯನ್ನು ಸುಮಾರು 20 ಜನ ಕೆಲಸಗಾರರು ಜೀರ್ಣೋದ್ಧಾರ ಮಾಡಿದ್ದು, ಈ ಕಲ್ಯಾಣಿ ಬಳಿ ಇರುವ ದೇವಾಲಯವನ್ನು ಸಹ ಜೀರ್ಣೊದ್ದಾರ ಮಾಡಲಾಗಿದೆ. ಇನ್ನು ಯಶೋಮಾರ್ಗದ ಸಲಹೆಗಾರರಾಗಿರುವ ಪರಿಸರವಾದಿ ಶಿವಾನಂದ ಕಳವೆ ಈ ಕೆಲಸದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಲ್ಲದೇ, ಖುದ್ದಾಗಿ ನಿಂತು ಕೆಲಸ ಮಾಡಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ಕೆ ಸಹಾಯ ಮಾಡಿದ ನಟ ಯಶ್ ಅವರಿಗೆ ಅವರು ಕೂಡ ಧನ್ಯವಾದ ತಿಳಿಸಿದ್ದಾರೆ.
ಪುನಶ್ಚೇತನಗೊಂಡ ‘ಚಂಪಕ ಸರಸ್ಸು’ ಪುಷ್ಕರಣಿ ಲೋಕಾರ್ಪಣೆ ಕಾರ್ಯಕ್ರಮ ಸರಳವಾಗಿ ನಡೆಯಿತು. ಈ ವೇಳೆ ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಇತಿಹಾಸ ತಜ್ಞ ಗುಂಡಾ ಜೋಯಿಸ್, ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಷ್ಕರಣಿಯನ್ನು ಗ್ರಾಮದ ಸುಪರ್ದಿಗೆ ನೀಡಲಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
