ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ವಕೀಲರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ವಕೀಲರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ ಎಂದು ಸುದೀರ್ಘ ಪತ್ರದಲ್ಲಿ ತಿಳಿಸಿರುವ ಪ್ರತಾಪ್ ಸಿಂಹ, ಮೈಸೂರು ವಕೀಲರ ಸಂಘದ ಎಲ್ಲಾ ಪ್ರಸ್ತಾಪಗಳಿಗೆ ಸ್ಪಂದಿಸಿದ್ದೇನೆ. ಕಾಂಗ್ರೆಸ್ ನಾಯಕರ ಅಪಪ್ರಚಾರಕ್ಕೆ ವಕೀಲರು ಕಿವಿಗೊಡಬಾರದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರತಾಪ್ ಸಿಂಹ ಬರೆದಿರುವ ಪತ್ರದ ಸಂಪೂರ್ಣ ಸಾರಾಂಶ ಈ ರೀತಿ ಇದೆ:
ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜೀ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲ ಸಲ್ಲದ ಆರೋಪ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕರ್ನಾಟಕದಿಂದ 19 ಲಕ್ಷ ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಲೂಟಿ ಮಾಡಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದ್ದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೆ.ಜಿ ಗೆ 32 ರೂಪಾಯಿ ಕೊಟ್ಟು ಅಕ್ಕಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ 3 ರೂಗೆ ನೀಡುತ್ತದೆ. ಅದರಲ್ಲಿ 2 ರೂ ಕಡಿಮೆ ಮಾಡಿ ನಾನು 1 ರೂ ಕೆ.ಜಿ ಗೆ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.
ಆದರೆ ಕೇಂದ್ರ ಸರ್ಕಾರ ಭರಿಸುವ 29 ರೂ ಬಗ್ಗೆ ಎಂದೂ ಮಾತನಾಡಲಿಲ್ಲ. ಜಗತ್ತಿನಾದ್ಯಂತ ಇರುವ ರಾಜತಾಂತ್ರಿಕ ಕಚೇರಿಗಳು , 15 ಲಕ್ಷ ಸೈನಿಕರು, 50 ಲಕ್ಷ ಕ್ಕಿಂತ ಹೆಚ್ಚು ಕೇಂದ್ರ ಸರ್ಕಾರದ ಉದ್ಯೋಗಿಗಳು ಇವರಿಗೆ ಸಂಬಳ ಎಲ್ಲಿಂದ ಕೊಡಬೇಕು ? ಪ್ರತಿವರ್ಷ ಖರೀದಿಸುವ ಶಸ್ತ್ರಾಸ್ತ್ರಗಳಿಗೆ, ಕೋವೀಡ್ ಸಂದರ್ಭದಲ್ಲಿ ಕೊಟ್ಟ ಉಚಿತ ಲಸಿಕೆಗಳಿಗೆ, ಕಳೆದ ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಉಚಿತ ಪಡಿತರ ಇವುಗಳಿಗೆ ದುಡ್ಡು ಎಲ್ಲಿಂದ ಬರಬೇಕು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಒಂದಕ್ಕೆ ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ಖರ್ಚಾಗುತ್ತದೆ. ಹೈವೆ- ರೈಲ್ವೆ ,ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಿಂದ 15ನೇ ಹಣಕಾಸು ಆಯೋಗದವರೆಗೂ 42 ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ಲಕ್ಷಾಂತರ ಕೋಟಿ ರೂ ಗಳನ್ನು ಕೇಂದ್ರ ಸರ್ಕಾರ ವಾಪಸ್ಸು ರಾಜ್ಯಗಳಿಗೆ ನೀಡುತ್ತದೆ.
ತಾಲ್ಲೂಕು ಕೋರ್ಟ್ನಲ್ಲಿ ವಕೀಲಗಿರಿ ಮಾಡುತ್ತಿದ್ದ ಸಿದ್ದರಾಮಯ್ಯನವರು 13 ಬಜೆಟ್ ಮಂಡಿಸಿದ್ದರೂ ಅರ್ಥ ವ್ಯವಸ್ಥೆಯ ಕನಿಷ್ಟ ಜ್ಞಾನವು ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ನಾನು ಟೀಕೆ ಮಾಡಿದ್ದೇನೆ ಹೊರತು ವಕೀಲ ವೃತ್ತಿಯ ಬಗ್ಗೆ ಹಗುರವಾಗಿ ಮಾತನಾಡಿರುವುದಲ್ಲ. ಆದರೂ ನನ್ನ ವಾದಕ್ಕೆ ಉತ್ತರಿಸಲಾಗದೆ ಕಾಂಗ್ರೆಸ್ಸಿನ ಕೆಲವರು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ವಕೀಲರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ. ಮೈಸೂರು ವಕೀಲರ ಸಂಘ ಯಾವುದೇ ಪ್ರಸ್ತಾವವನ್ನು ನನ್ನ ಮುಂದಿಟ್ಟಾಗಲೂ ಸ್ಪಂದಿಸಿದ್ದೇನೆ, ಕಾಂಗ್ರೆಸ್ಸಿಗರ ಅಪಪ್ರಚಾರಕ್ಕೆ ವಕೀಲ ಬಂಧುಗಳು ಕಿವಿಕೊಡಬಾರದೆಂದು ವಿನಂತಿಸುತ್ತೇನೆ.
-ಪ್ರತಾಪ್ ಸಿಂಹ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
