ತಿಂಗಳಿನಿಂದಲೂ ನಾಪತ್ತೆಯಾಗಿದ್ದ ಮಗ ಮೃತಪಟ್ಟ ಎಂದು ತಿಳಿದು ತಿಥಿ ಮಾಡುತ್ತಿದ್ದಾಗ ಮಗ ಪ್ರತ್ಯಕ್ಷನಾದ ಘಟನೆ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆಕಾಶ್ ಸರ್ಕಾರ್ ಎಂಬ ಹುಡುಗ ಜೂನ್ 7 ರಂದು ಮನೆಗೆ ಮರಳಿದ್ದಾನೆ. ಈ ವೇಳೆ ಮನೆಯವರು ಆತ ಸತ್ತಿದ್ದಾನೆ ಎಂದು ಭಾವಿಸಿ ಆತನ ಅಂತಿಮ ವಿಧಿ ವಿಧಾನಗಳನ್ನು ನಡೆಸುತ್ತಿದ್ದರು. ಅಷ್ಟರಲ್ಲೇ ಮಗ ಮನೆಗೆ ಆಗಮಿಸಿದ್ದು, ಅಚ್ಚರಿ ದಿಗ್ಭ್ರಮೆ ಉಂಟಾಗಿದೆ.
ಅಗರ್ತಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲರಮಠ ಬಳಿಯ ಕೆರೆಯಲ್ಲಿ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಪ್ರಾಥಮಿಕ ವಿಚಾರಣೆಯ ನಂತರ ಮೃತರು ಕಳೆದ ತಿಂಗಳು ನಾಪತ್ತೆಯಾಗಿದ್ದವ ಕಾಳಿಬಜಾರ್ ನಿವಾಸಿ ಎಂದು ತಿಳಿದುಬಂದಿತ್ತು. ನಂತರ ಆಕಾಶ್ ತಂದೆಗೆ ವಿಷಯ ತಿಳಿಸಿದ್ದರು. ಆಕಾಶ್‌ನ ತಂದೆ ಪ್ರಣಬ್ ಸರ್ಕಾರ್ ಅವರನ್ನು ಪೊಲೀಸರು ಸಂಪರ್ಕಿಸಿ ಇದು ನಿಮ್ಮ ಮಗನದ್ದೇ ಶವವೇ ಎಂದು ಗುರುತಿಸುವಂತೆ ಕೇಳಿದ್ದರು. ಆಸ್ಪತ್ರೆಗೆ ಧಾವಿಸಿದ್ದ ಪ್ರಣಬ್ ಶವವನ್ನು ನೋಡಿದ್ದರು. ಅದರ ಪ್ಯಾಂಟ್ ಮತ್ತು ಟ್ಯಾಬ್ಲೆಟ್‌ಗಳನ್ನು ಹೊಂದಿರುವ ಚೀಲವನ್ನು ನೋಡಿದ ಅವರು ಶವ ತಮ್ಮ ಮಗನದ್ದೇ ಎಂದು ಹೇಳಿದರು. ಶವ ಕೊಳೆತು ಹೋಗಿದ್ದರಿಂದ ಮುಖ ಗುರುತಿಸುವುದು ಕಷ್ಟವಾಗಿತ್ತು. ನಂತರ ಪೊಲಿಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮೊನ್ನೆ ಮಗನ ತಿಥಿ ಕಾರ್ಯ ನಡೆಯುತ್ತಿತ್ತು. ಜನರು ಮನೆಯಲ್ಲಿ ಸೇರಿದ್ದರು. ಆಕಾಶ್‌ನ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು ಇನ್ನೂ ದುಃಖದಲ್ಲಿ ಮುಳುಗಿದ್ದರು. ಇದೇ ವೇಳೆ ಆಕಾಶ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಆತನನ್ನು ನೋಡಿ ಕುಟುಂಬದವರು ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಅದು ಆಕಾಶನೇ ಎಂದು ತಿಳಿದಾಗ ಆದ ಅಚ್ಚರಿ, ಸಂತೋಷ ಅಷ್ಟಿಷ್ಟಲ್ಲ.
ಮಾದಕ ವ್ಯಸನಿಯಾಗಿದ್ದ ಆಕಾಶ್ ಒಂದು ತಿಂಗಳ ಹಿಂದೆ ಮನೆಯಿಂದ ಹೊರಬಂದು ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದೆ ಎಂದು ಹೇಳಿದ್ದಾನೆ. ನಾನು ಬಟಾಲ ಸೇತುವೆಯ ಬಳಿ ವಾಸಿಸುತ್ತಿದ್ದೆ ಮತ್ತು ನನ್ನ ಬೆನ್ನುನೋವಿನಿಂದ ದೈಹಿಕ ಕೆಲಸ ಮಾಡಲು ಸಾಧ್ಯವಾಗದ ಕಾರಣ ಜೀವನಕ್ಕಾಗಿ ಭೀಕ್ಷೆ ಬೇಡುತ್ತಿದೆ. ನನ್ನನ್ನು ಅಗರ್ತಲಾದ ಜಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನನ್ನ ಚಿಕ್ಕಮ್ಮ ನನ್ನನ್ನು ಮನೆಗೆ ಕರೆತಂದರು ಮತ್ತು ನಾನು ಜೀವಂತವಾಗಿದ್ದೇನೆ ಎಂದು ನನ್ನ ಪೋಷಕರಿಗೆ ತಿಳಿಸಿದರು. ಮನೆಯಲ್ಲಿ ನನ್ನ ಶ್ರದ್ಧಾ ಮಾಡುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಆತ ಹೇಳಿದ್ದಾನೆ.
ಮೃತದೇಹ ಮಗನದ್ದೇ ಎಂದು ಒಪ್ಪಿಕೊಳ್ಳುವಂತೆ ಒತ್ತಡ
ನಾಪತ್ತೆಯಾಗಿರುವ ನನ್ನ ಮಗನಂತೆಯೇ ಹೋಲುವ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಇದು ನನ್ನ ಮಗನ ರೂಪಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಾನು ಪದೇ ಪದೇ ಪೊಲೀಸರಿಗೆ ಹೇಳಿದ್ದೆ. ನೀರಿನಲ್ಲಿ ಮುಳುಗಿದ್ದರಿಂದ ದೇಹವು ಊದಿಕೊಂಡಿದೆ ಎಂದು ಪೊಲೀಸರು ಒತ್ತಾಯಿಸಿದರು. ವಾಸ್ತವವಾಗಿ, ಶವದೊಂದಿಗೆ ಪತ್ತೆಯಾದ ಮಾತ್ರೆಗಳು ಮತ್ತು ಪ್ಯಾಂಟ್ ಒಳಗೊಂಡಿರುವ ಚೀಲವು ನನ್ನ ಮಗನದ್ದಾಗಿದೆ ಎಂದು ಅವರು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
