fbpx
ಸಮಾಚಾರ

ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಬಗ್ಗೆ ಅಪಹಾಸ್ಯ; ರಾಮ್​ಗೋಪಾಲ್ ವರ್ಮ ವಿರುದ್ಧ ದೂರು ದಾಖಲು

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಿನಿಮಾ ನಿರ್ದೇಶಕ ರಾಮ್​ಗೋಪಾಲ್ ವರ್ಮ ಇದೀಗ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ವಿರುದ್ಧ ವಿವಾದಾತ್ಮಕ ಟ್ವೀಟ್‌ ಮಾಡುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ವರ್ಮ, ದ್ರೌಪದಿಯವರು ರಾಷ್ಟ್ರಪತಿಯಾದರೆ ಪಾಂಡವರು ಮತ್ತು ಕೌರವರು ಯಾರು ಎಂದು ಕೇಳಿದ್ದರು. ಈ ಟ್ವೀಟ್ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ ನಂದೇಶ್ವರ್ ಗೌಡ ಒಂದು ಹೆಜ್ಜೆ ಮುಂದೆ ಹೋಗಿ ಹೈದರಾಬಾದ್ ನ ಅಬಿಡ್ಜ್ ಪೊಲೀಸ್ ಠಾಣೆಯಲ್ಲಿ ವರ್ಮ ವಿರುದ್ಧ ದೂರು ಕೂಡ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

 

ಈ ಟ್ವೀಟ್‌ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ರಾಮ್ ಗೋಪಾಲ್ ವರ್ಮಾ ವಿರುದ್ಧ ಎಸ್‌ಸಿ –ಎಸ್‌ಟಿ ಕಾನೂನಿನ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ತೆಲಂಗಾಣ ಬಿಜೆಪಿಯ ಹಿರಿಯ ನಾಯಕ ಜಿ. ನಾರಾಯಣರೆಡ್ಡಿ ಅಬಿಡ್‌ ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನಾವು ದೂರು ಸ್ವೀಕರಿಸಿದ್ದು, ಕಾನೂನಿನ ಅಭಿಪ್ರಾಯ ಕೇಳಿದ್ದೇವೆ. ಕಾನೂನು ಅಭಿಪ್ರಾಯ ಸ್ವೀಕರಿಸಿದ ಬಳಿಕ ವರ್ಮಾ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ’ ಎಂದು ಅಬಿಡ್‌ ರೋಡ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಬಿ.ಪ್ರಸಾದ್ ರಾವ್ ತಿಳಿಸಿದ್ದಾರೆ.

 

 

RGV ಸ್ಪಷ್ಟನೆ:
ವಿವಾದ ಕಾವು ಪಡೆದುಕೊಳ್ಳುತ್ತಿದ್ದಂತೆ ಆರ್‌ಜಿವಿ ಟ್ವೀಟ್‌ ಬಗ್ಗೆ ಸ್ವಷ್ಟನೆ ಕೊಟ್ಟಿದ್ದಾರೆ. ‘ಇದನ್ನು ಕೇವಲ ವ್ಯಂಗ್ಯವಾಗಿ ಹೇಳಲಾಗಿದೆ ಮತ್ತು ಬೇರೆ ಯಾವುದೇ ರೀತಿಯಲ್ಲಿ ಉದ್ದೇಶಿಸಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರ ಅಲ್ಲದೆ ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಈಗ ದ್ರೌಪದಿ ಅಂತ ಹೆಸರು ಕೇಳಿದ ತಕ್ಷಣ ನಾನು ಮಹಾಭಾರತದ ಪಾತ್ರವನ್ನು ನೆನಪಿಸಿಕೊಂಡೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಯಾರ ಭಾವನೆಗಳಿಗೂ ದಕ್ಕೆ ತರಲು ನಾನು ಈ ರೀತಿ ಹೇಳಿಕೆ ಟ್ವೀಟ್ ಮಾಡಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top