ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಕೊರೊನಾದಿಂದಲೇ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿರಬಹುದೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ, ಈ ವರ್ಷ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೊವಿಡ್ ತಗುಲಿತ್ತು. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾಲ್ಲಿ ಬರೆದುಕೊಂಡಿದ್ದರು. ಕೊವಿಡ್ ಬಂದುಹೋದ ಬೆನ್ನಲ್ಲೇ ಅವರಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಅನುಮಾನ ಮೂಡಿದೆ.
ಕನ್ನಡ ಸೇರಿದಂತೆ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಮೀನಾ, 2009 ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ನೈನಿಕಾ ಎಂಬ ಮಗಳಿದ್ದಾಳೆ, ತಾಯಿಯ ಹಾದಿಯನ್ನು ಅನುಸರಿಸುತ್ತಿರುವ ನೈನಿಕಾ ‘ತೇರಿ’ ಚಿತ್ರದಲ್ಲಿ ಬಾಲನಟಿಯಾಗಿ ತೆರೆಯ ಮೇಲೆ ಪಾದಾರ್ಪಣೆ ಮಾಡಿದ್ದಾರೆ.
ವಿದ್ಯಾಸಾಗರ್ ಅಗಲಿಕೆಯಿಂದ ದಕ್ಷಿಣ ಭಾರತದ ಚಿತ್ರರಂಗದ ಅನೇಕ ನಟ, ನಟಿಯರು ಸೇರಿದಂತೆ ಚಿತ್ರರಂಗದ ಅನೇಕರು ಮೀನಾ ಮತ್ತು ಅವರ ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
