ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಚ್ಚು ಕಡಿಮೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಅಧಿಕ ಮಳೆಯಿಂದ ಮನೆಹಾನಿಯಾಗುತ್ತಿರುವ ಘಟನೆಗಳು, ಸಾವು ನೋವಿನ ಘಟನೆಗಳು ವರದಿಯಾಗಿವೆ. ಈ ಮಧ್ಯೆ ಭಾರಿ ಮಳೆಗೆ ಶ್ರವಣಬೆಳಗೊಳ ಕೋಟೆ ಕುಸಿತವಾಗಿದೆ.
ಶ್ರವಣಬೆಳಗೊಳದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಒಳಚರಂಡಿ ತುಂಬಿ ರಸ್ತೆಗಳು ಹಳ್ಳದಂತಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಜನತೆ ಆತಂಕದಲ್ಲಿದ್ದಾರೆ. ಭಾರಿ ಮಳೆಗೆ ಸಾವಿರಾರು ವರ್ಷ ಇತಿಹಾಸವಿರೋ ಶ್ರವಣಬೆಳಗೊಳ ಕೋಟೆ ಕುಸಿತವಾಗಿದೆ.
ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮೂರ್ತಿ ಸುತ್ತಲೂ ಕೋಟೆ ಕಟ್ಟಿದ್ದು, ಭಾರಿ ಮಳೆಗೆ ಕೋಟೆಯ ಕಲ್ಲುಗಳು ಉರುಳಿ ಬಿದ್ದಿವೆ. ಬೆಟ್ಟಕ್ಕೆ ಹತ್ತುವ ದಾರಿ ಮಧ್ಯೆ ಭಾರಿ ಗಾತ್ರದ ಬಂಡೆಗಳು ಉರುಳಿದ್ದು, ಬೆಟ್ಟದ ತಪ್ಪಲು ಜನ ಆತಂಕಗೊಂಡಿದ್ದಾರೆ. ಮೆಟ್ಟಿಲುಗಳ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಬಿದ್ದಿರುವುದರಿಂದ ಬೆಟ್ಟ ಹತ್ತಲು ನಿರ್ಬಂಧಿಸಲಾಗಿದೆ..
ಮಾನ್ಯ @CMofKarnataka
ಐತಿಹಾಸಿಕ ಪರಂಪರೆಯ ತ್ಯಾಗವೀರ ಬಾಹುಬಲಿಯ ಬೆಟ್ಟದಲ್ಲಿ ಕೋಟೆಯ ಕಲ್ಲುಗಳು ಪಾಕೃತಿಕ ವೈಪರೀತ್ಯಕ್ಕೆ ನಲುಗಿ ಕುಸಿದು ಬೀಳಲಾರಂಭಿಸಿದೆ.ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ವಿಂಧ್ಯಗಿರಿಯ ಆಗುಹೋಗುಗಳು ಮುದ್ರಣಗೊಂಡಿದೆ.ಸರ್ಕಾರ ಆಲಸ್ಯ ಬಿಟ್ಟು ವಿಂದ್ಯಗಿರಿಯ ರಕ್ಷಣೆಗೆ ಮುಂದಾಗಬೇಕಿದೆ.@KotasBJP pic.twitter.com/0AuoFTCQpC— GC ChandraShekhar (@GCC_MP) August 4, 2022
ಶ್ರಾವಣ ಬೆಳಗೊಳದ ಕೋಟೆ ಕುಸಿತವಾಗಿರುವ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಸಿಎಂ ಬೊಮ್ಮಾಯಿ ಗಮನಕ್ಕೆ ತಂದಿದ್ದು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚಂದ್ರಶೇಖರ್ “ಐತಿಹಾಸಿಕ ಪರಂಪರೆಯ ತ್ಯಾಗವೀರ ಬಾಹುಬಲಿಯ ಬೆಟ್ಟದಲ್ಲಿ ಕೋಟೆಯ ಕಲ್ಲುಗಳು ಪಾಕೃತಿಕ ವೈಪರೀತ್ಯಕ್ಕೆ ನಲುಗಿ ಕುಸಿದು ಬೀಳಲಾರಂಭಿಸಿದೆ. ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ವಿಂಧ್ಯಗಿರಿಯ ಆಗುಹೋಗುಗಳು ಮುದ್ರಣಗೊಂಡಿದೆ. ಇಂತಹ ಭವ್ಯ ಪರ್ವತದ ಕೋಟೆಯ ಹಾಗೂ ಆಸುಪಾಸಿನ ಬೃಹತ್ ಬಂಡೆಗಳು ಉರುಳಿಬಿದ್ದು ಆತಂಕವನ್ನು ಉಂಟು ಮಾಡಿದೆ. ಇದು ಕೇವಲ ಜೈನರ ಶೃದ್ಧಾ ಕೇಂದ್ರವಲ್ಲ, ದೇಶ ವಿದೇಶದ ಪ್ರವಾಸಿಗರನ್ನೂ ಕೂಡ ಈ ಕ್ಷೇತ್ರ ಕೈಬೀಸಿ ಕರೆಯುತ್ತಿದೆ. ಸರ್ಕಾರ ಆಲಸ್ಯ ಬಿಟ್ಟು ವಿಂದ್ಯಗಿರಿಯ ರಕ್ಷಣೆಗೆ ಮುಂದಾಗಬೇಕಿದೆ.” ಎಂದು ಆಗ್ರಹಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
