fbpx
ಸಮಾಚಾರ

ಬಹುನಿರೀಕ್ಷಿತ ‘ಹೆಡ್ ಬುಷ್’ ಚಿತ್ರದ ಮೊದಲ ಹಾಡು ‘ರೌಡಿಗಳು ನಾವು ರೌಡಿಗಳು’ ರಿಲೀಸ್

‘ನಟ ರಾಕ್ಷಸ’ ಡಾಲಿ ಧನಂಜಯ್ ಅವರ ನಟನೆಯ ‘ಹೆಡ್ ಬುಷ್’ ಚಿತ್ರದ ಮೇಲೆ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಪರ್ವತದಷ್ಟಿದೆ. ಅದಕ್ಕೆ ಕಾರಣ ಹಲವಾರು, ಚಿತ್ರದಲ್ಲಿರುವ ದೊಡ್ಡ ತಾರಾಬಳಗ, ತಂತ್ರಜ್ಞರು ಒಂದು ಕಾರಣವಾದರೆ ‘ಹೆಡ್ ಬುಷ್’ ಚಿತ್ರ ಬೆಂಗಳೂರು ಭೂಗತ ಲೋಕದ ಸುತ್ತ ಹೆಣೆಯಲಾದ ರೋಚಕ ಕತೆ ಎಂಬುದು ಮತ್ತೊಂದು ಕಾರಣ. ಪತ್ರಕರ್ತ ಅಗ್ನಿ ಶ್ರೀಧರ್ ಅವರ ‘ದಾದಾಗಿರಿ ದಿನಗಳು’ ಪುಸ್ತಕ ಆಧರಿತವಾಗಿ ಸಿದ್ಧವಾಗಿರುವ ಈ ಚಿತ್ರ ಮೂರು ಭಾಗಗಳಲ್ಲಿ ಮೂಡಿಬರುತ್ತಿದ್ದು ಈ ಕತೆಯ ಮೊದಲ ಭಾಗದ ಹಾಡೊಂದು ಇಂದು ನಟ ಡಾಲಿ ಧನಂಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.

 

 

‘ರೌಡಿಗಳು ನಾವು ರೌಡಿಗಳು’ ಎಂಬ ಹಾಡನ್ನು ಚಿತ್ರತಂಡ ಇಂದು ರಿಲೀಸ್ ಮಾಡಿದ್ದು ಕೇಳಲು ಸಕತ್ ಕ್ಯಾಚಿಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಗ್ನಿ ಶ್ರೀಧರ್ ಸಾಹಿತ್ಯ ಬರೆದಿದ್ದು ಸಂಜಿತ್ ಹೆಗ್ಡೆ ಮತ್ತು ದೀಪಕ್ ಗಾಯನವಿದೆ. ಹಾಡಿನಲ್ಲಿ ಜಯರಾಜು ಆಗಿ ಧನಂಜಯ್, ಗಂಗಾ ಆಗಿ ಲೂಸ್ ಮಾದ ಕಾಣಿಸಿಕೊಂಡಿದ್ದು, ಅವರ ಲುಕ್‌ ರಿವೀಲ್ ಆಗಿದೆ. ಜಯರಾಜ್ ಬಾಲ್ಯದ ದಿನಗಳು, ಅವರು ಆಡಿ ಬೆಳೆದ ಪರಿ ಹೇಗಿತ್ತು ಎಂದು ಹಾಡಿನಲ್ಲಿ ತೋರಿಸಲಾಗಿದೆ.

ಅಂದಹಾಗೆ ಹೆಡ್ ಬುಷ್ ಭಾಗ-1 ಚಿತ್ರ ಇದೆ ಅಕ್ಟೋಬರ್ 21ರಂದು ದೀಪಾವಳಿ ಹಬ್ಬದ ವಿಶೇಷವಾಗಿ ತೆರೆಗೆ ಬರುತ್ತಿದೆ. ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೆಡ್ ಬುಷ್ ಚಿತ್ರದ ಬೃಹತ್ ತಾರಾಗಣದಲ್ಲಿ ಡಾಲಿ ಧನಂಜಯ ಅವರೊಂದಿಗೆ ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಹಿರಿಯ ನಟ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top