fbpx
ಸಮಾಚಾರ

ಅಪ್ಪು ಮೊದಲ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಭಾವುಕ ಪತ್ರ

ಚಂದನವನದ ರಾಜರತ್ನ, ಪುನೀತ್ ರಾಜಕುಮಾರ್ ಹಠಾತ್ ಕಣ್ಮರೆಯಾಗಿ, ಗತಿಸಿಹೋಗಿ ಇಂದು ಅಕ್ಟೋಬರ್ 29ಕ್ಕೆ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಇದೇ ದಿನ ತೀವ್ರ ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದಾಗ ಇಡೀ ಕರುನಾಡು ನಲುಗಿಹೋಗಿತ್ತು. ನೋವು, ಕಣ್ಣೀರು, ಆಕ್ರಂದನದ ಮಧ್ಯೆ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ.

 

 

ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಇರುವ ಅಪ್ಪು ಸಮಾಧಿಗೆ ಪುನೀತ್ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು. ಜೊತೆಗೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳಿಗೆ ಅಶ್ವಿನಿ ಭಾವುಕ ಪತ್ರ ಬರೆದಿದ್ದಾರೆ.

‘ನೆನಪಿನ ಸಾಗರದಲ್ಲಿ’ ಎಂಬ ಸಾಲುಗಳೊಂದಿಗೆ ಪತ್ರ ಆರಂಭಿಸಿದ್ದಾರೆ ಅಶ್ವಿನಿ. ‘ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳಲ್ಲಿ, ನಾವು ಮಾಡುವ ಸತ್ಕಾರ್ಯಗಳಲ್ಲಿ, ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗು ಕೋಟ್ಯಾಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’ ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ಹೇಳಿದ್ದಾರೆ.

‘ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು’ ಎಂದು ಅಶ್ವಿನಿ ಪತ್ರವನ್ನು ಕೊನೆಗೊಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top