ಈಗಿನ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಇನ್ಸ್ಟಾ ರೀಲ್ ಮಾಡುವುದು ಯುವಕರ ಗೀಳಾಗಿ ಪರಿಣಮಿಸಿದೆ. ಆಯಾ ಕಾಲಕ್ಕೆ ಪ್ರಸಿದ್ದಿ ಪಡೆಯುವ ಹಾಡು, ಡೈಲಾಗುಗಳ ರೀಲ್ಸ್ ಮಾಡಿ ಅಪ್ಲೋಡ್ ಮಾಡುವುದು ಸರ್ವೇ ಸಾಮಾನ್ಯ. ಅದೇ ರೀತಿ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಯುವತಿಯೊಬ್ಬಳು ದೈವ ಭಕ್ತರ ಭಾವನೆಗೆ ದಕ್ಕೆ ತಂದಿದ್ದಳು. . ಸದ್ಯ ತನ್ನ ತಪ್ಪಿನ ಅರಿವಾದ ಹಿನ್ನೆಲೆ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಆಗಮಿಸಿದ ಯುವತಿ ತೀರ್ಥ ಸ್ನಾನ ಮಾಡಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ.
ಹೌದು, ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಎಂಬಾಕೆ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಪಂಜುರ್ಲಿ ದೈವದ ರೀತಿಯೇ ಬಣ್ಣ ಹಚ್ಚಿ ವೇಷ ಧರಿಸಿ ಕಾಂತಾರಾ ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದರು. ಈಕೆಯ ರೀಲ್ಸ್ ಬಳಿಕ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿದ್ದಾಳೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೇ ಶ್ವೇತಾ ರೆಡ್ಡಿಯನ್ನು ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ, ದೈವಗಳು ನೋಡಿಕೊಳ್ಳಲಿ ಎಂದು ಹಲವರು ಎಚ್ಚರಿಕೆ ಸಂದೇಶ ಹಾಕಿದ್ದರು.
ಶ್ವೇತಾ ರೆಡ್ಡಿಗೆ ತಪ್ಪಿನ ಅರಿವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಬಳಿ ಬಂದು ಮುಂದೇ ಯಾವುದೇ ತೊಂದರೆ ಆಗದಿರಲಿ ಎಂದು ತಪ್ಪು ಕಾಣಿಕೆ ಹಾಕಿದ್ದಾಳೆ. ತೀರ್ಥ ಸ್ನಾನ ಮಾಡಿ ತಪ್ಪು ಕಾಣಿಕೆ ಹಾಕಿದ ಶ್ವೇತಾ, ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದಿದ್ದಾಳೆ. ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿಯಾಗಿ ಕ್ಷಮೆ ಯಾಚನೆ ಮಾಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ವೇತಾ, ಇದನ್ನು ತಿಳಿದು ಮಾಡಿರಲಿಲ್ಲ, ಯಕ್ಷಗಾನ ಪಾತ್ರ ಮತ್ತು ಇದು ಒಂದೇ ಎಂದುಕೊಂಡಿದ್ದೆ. ಟೀಕೆಗಳು ಬಂದ ಬಳಿಕ ಬೇರೆ ಬೇರೆ ಎಂದು ತಿಳಿಯಿತು. ಸಮಸ್ತ ದೈವಾ ರಾಧಕರಲ್ಲಿ ಹಾಗೂ ಜನತೆಯಲ್ಲಿ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಳ್ಳುವುದಾಗಿ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
