ರಾಜಕಾರಣದ ಗುಂಗಿಗೆ ಬಿದ್ದು ಚಿತ್ರ ರಂಗದಿಂದ ಮರೆಯಾಗಿದ್ದ ರಮ್ಯಾರನ್ನ ಅಭಿಮಾನಿಗಳು ಮಿಸ್ ಮಾಡಿಕಳ್ತಲೇ ಇದ್ದಾರೆ. ಆದರೆ ರಮ್ಯಾ ಮತ್ತೆ ಬಣ್ಣಹಚ್ಚಬಹುದೆಂಬ ನಿರೀಕ್ಷೆ ಕೂಡಾ ಇತ್ತಿತ್ತಲಾಗಿ ಮಂಕಾಗಿತ್ತು. ಆದರೆ ಸ್ಯಾಂಡಲ್ವುಡ್ಗೆ ಮತ್ತೆ ರಮ್ಯಾ ವಾಪಸ್ ಬರ್ತಾರಾ ಅಥವಾ ಇಲ್ವಾ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ. ಈ ವಾದ ವಿವಾದಗಳ ನಡುವೆ ಸ್ಯಾಂಡಲ್ವುಡ್ ಕ್ವೀನ್ ಮತ್ತೆ ಸಿನಿಮಾದಲ್ಲಿ ನಟಿಸೋದು ಕನ್ಪರ್ಮ್ ಎಂಬ ಸುದ್ದಿಯಿದೆ. ಅದೂ ಕೂಡ ಚಂದನವನದ ಸ್ಟಾರ್ ನಟನ ಜೊತೆ ಅನ್ನೋದೇ ಇಂಟ್ರೆಸ್ಟಿಂಗ್ ಸಂಗತಿ.
ಅಂದುಕೊಂಡಂತೆ ಆಗಿದ್ದರೆ, ರಮ್ಯಾ ತಮ್ಮದೇ ನಿರ್ಮಾಣದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಬೇಕಿತ್ತು. ಆದರೆ, ಬೇರೊಬ್ಬ ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಸುದ್ದಿ ಅಧಿಕೃತವಾಗಲಿದೆ ಎಂದೂ ಹೇಳಲಾಗುತ್ತಿದೆ.
ಸಿನಿಪ್ರಿಯರು ಕಂಡುಕೊಂಡಂತೆ “ಉತ್ತರಕಾಂಡ’ ಚಿತ್ರದ ಮೂಲಕ ನಟಿ ರಮ್ಯಾ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರಂತೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರೆ ಒಳ್ಳೆಯದು ಎಂಬ ಆಪ್ತರ ಸಲಹೆ ಮೇರೆಗೆ ರಮ್ಯಾ “ಸ್ವಾತಿ ಮುತ್ತಿ’ನಿಂದ ಹೊರಬಂದಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಜೊತೆಗೆ “ಉತ್ತರಕಾಂಡ’ ಚಿತ್ರಕ್ಕಾಗಿ ರಮ್ಯಾ ಸಖತ್ ಸ್ಲಿಮ್ ಕೂಡಾ ಆಗುತ್ತಿದ್ದಾರಂತೆ.
ಈ ಚಿತ್ರವನ್ನು ಕೆ.ಆರ್.ಜಿ.ಸ್ಟುಡಿಯೋಸ್ ನಿರ್ಮಿಸುತ್ತಿದ್ದು, ರೋಹಿತ್ ಪದಕಿ ನಿರ್ದೇಶನವಿದೆ. ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಬಹಳ ಸುಂದರವಾಗಿ ಕಥೆಯ ರೂಪದಲ್ಲಿ ರೋಹಿತ್ ಅವರು ಹೆಣೆದಿದ್ದಾರೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ಚಿತ್ರ ನ.06ರಂದು ಸೆಟ್ಟೇರುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
