fbpx
ಸಮಾಚಾರ

ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಸಾವಿನ ಸುತ್ತ ಹಲವಾರು ಅನುಮಾನ!

ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅವರು ಹಲವಾರು ದಿನಗಳಿಂದ ಕಾಣೆಯಾಗಿದ್ದರು. ಆದರೆ ಇದೀಗ ಈ ಪ್ರಕರಣ ದುರಂತ ಅಂತ್ಯ ಕಂಡಿದೆ. ಚಂದ್ರಶೇಖರ್ ಅವರು ಹೊರಟಿದ್ದ ಕಾರು ಹೊನ್ನಾಳಿ–ನ್ಯಾಮತಿ ಮಧ್ಯ ಭಾಗದಲ್ಲಿರುವ ಎಚ್.ಕಡದಕಟ್ಟೆ ಗ್ರಾಮದ ಬಳಿಯ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆಯಾಗಿದ್ದು, ಕಾರ್‌ನ ಹಿಂಬದಿಯ ಸೀಟಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಇವರ ಸಾವಿನ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದೆ.

ಕಾಲುವೆಯಲ್ಲಿ ಪತ್ತೆಯಾದ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇದರ ಬಿಡಿ ಭಾಗಗಳು ಕಾಲುವೆಯ ಸುತ್ತ ಬಿದ್ದಿದ್ದವು. ಇದನ್ನು ಕಂಡ ಸ್ಥಳೀಯರು ಶಾಸಕ ರೇಣುಕಾಚಾರ್ಯ ಅವರಿಗೆ ವಿಷಯ ತಿಳಿಸಿದರು. ಹೀಗಾಗಿ ಕಾರು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾದ ಕಾರಣ ಪೊಲೀಸರು ಶೋಧ ಕಾರ್ಯವನ್ನು ಶುರುಮಾಡಿದ್ದರು. ನಾಲೆಯ ನೀರು ಸ್ವಲ್ಪ ಇಳಿಮುಖ ವಾಗುತ್ತಿದ್ದಂತೆ ಅಲ್ಲಿ ಬಿಳಿ ಬಣ್ಣದ ಕಾರು ಕಾಣುತ್ತದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರನ್ನು ಕರೆಸಿ ಎರಡು ಬೃಹತ್ತಾದ ಕ್ರೇನ್‌ಗಳನ್ನು ಬಳಸಿ ಮುಳುಗಿದ್ದ ಕಾರನ್ನು ಮೇಲೆತ್ತಲಾಯಿತು. ಕಾರಿನ ಹಿಂಬದಿ ಸೀಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಚಂದ್ರಶೇಖರ್ ಅವರ ಮೃತದೇಹ ಎಂದು ಇವರ ಸ್ನೇಹಿತರು ಮತ್ತು ಸಂಬಂಧಿಕರು ಖಚಿತ ಪಡಿಸಿದ್ದರು.

ಸುಮಾರು 3 ದಿನಗಳಿಂದ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಅಕ್ಟೋಬರ್ 30 ರಂದು ನಾಪತ್ತೆಯಾಗಿದ್ದ ಇವರು ರಾತ್ರಿ 11.50ರ ನಂತ್ರ ಸಂಪರ್ಕ ಕಳೆದುಕೊಂಡಿದ್ದರು. ಅವರು ಶಿವಮೊಗ್ಗದಿಂದ ಹೊರಟು ಸುರಹೊನ್ನೆಗೆ ಬಂದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ ಇವರು ಹೊನ್ನಾಳಿ ತಲುಪಿರಲಿಲ್ಲ. ಇದಲ್ಲದೆ ಇವರ ಕಾರಿನ ಹಿಂದೆ ಒಂದು ಓಮ್ನಿ ಕಾರು ಕೂಡ ಹಿಂಬಾಲಿಸಿಕೊಂಡು ಬರುತ್ತಿತ್ತು ಎಂದು ಸಹ ಹೇಳಲಾಗುತ್ತಿದೆ. ಹೀಗಾಗಿ ಇವರ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದ್ದು, ತನಿಖೆಯ ನಂತರ ನಿಖರವಾದ ಮಾಹಿತಿ ದೊರೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top